Top Newsಜಿಲ್ಲೆಸುದ್ದಿ

ಹೆಣ್ಣಿನ ಮಾನ ಹರಾಜು ಹಾಕಿದ್ದ ಕಾಮುಕರಿಗೆ ಕಠಿಣ ಶಿಕ್ಷೆ!ವಂಟಮೂರಿ ಪಾಪಿಗಳಿಗೆ ಜೈಲೇ ಗತಿ!

ಬೆಳಗಾವಿ: ವಂಟಮೂರಿ ಗ್ರಾಮದಲ್ಲಿ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ್ದ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ. ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದ ಪ್ರಕರಣದ 12 ಮಂದಿ ಅಪರಾಧಿಗಳಿಗೆ ಬೆಳಗಾವಿಯ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.

ನ್ಯಾಯಾಧೀಶರಾದ ಎಚ್.ಎಸ್. ಮಂಜುನಾಥ್ ಅವರು ಅಪರಾಧಿಗಳಿಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿದ್ದು, ತೀರ್ಪು ಪ್ರಕಟವಾಗುತ್ತಿದ್ದಂತೆ ಅಪರಾಧಿಗಳು ಹಾಗೂ ಅವರ ಕುಟುಂಬಸ್ಥರು ನ್ಯಾಯಾಲಯದ ಆವರಣದಲ್ಲೇ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
2023ರ ಡಿಸೆಂಬರ್ 11ರಂದು ವಂಟಮೂರಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ಮನೆಯವರಿಂದ ಮರೆಯಾಗಿ ಓಡಿಹೋಗಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡ ಯುವತಿಯ ಕಡೆಯವರು, ಯುವಕನ ತಾಯಿಯನ್ನು ಹಿಡಿದು ಅಮಾನವೀಯವಾಗಿ ನಡೆಸಿಕೊಂಡಿದ್ದರು. ಅವರನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ನಡೆಸಿದ್ದಲ್ಲದೆ, ಯುವಕನ ಮನೆಯನ್ನೂ ಸಂಪೂರ್ಣವಾಗಿ ಧ್ವಂಸ ಮಾಡಿದ್ದರು. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ ಇಡೀ ದೇಶಾದ್ಯಂತ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಬಸಪ್ಪ, ರಾಜು, ಕೆಂಪಣ್ಣ, ಪಾರ್ವತಿ, ಯಲ್ಲವ್ವ, ಲಕ್ಕಪ್ಪ, ಗಂಗವ್ವ, ಸಂಗೀತಾ, ಸಂತೋಷ, ಶೋಭಾ, ಲಕ್ಕವ್ವ ಮತ್ತು ಶಿವಪ್ಪ ವನ್ನೂರು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಈ ಪ್ರಕರಣದಲ್ಲಿ ಕಾನೂನು ತನ್ನ ಚಾಟಿಯೇಟು ಬೀಸಿದ್ದು, ಸಂತ್ರಸ್ತ ಮಹಿಳೆಗೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ.

Comments (0)

Your email address will not be published. Required fields are marked *

Back to top button