ಜಿಲ್ಲೆಹಣಕಾಸು

ರಾಜ್ಯದ 578 ಸಾಧಕರಿಗೆ ಇನ್ನೂ ಸಿಕ್ಕಿಲ್ಲ ಮುಡಾ ನಿವೇಶನ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರಾಜ್ಯದ ನಾನಾ ಭಾಗದ ಕಲೆ, ಸಾಹಿತ್ಯ, ಕ್ರೀಡಾ ಸಾಧಕರು, ಮಾಜಿ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರು ವರ್ಷದ ಆರಂಭದಲ್ಲಿಯೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ವರ್ಷ ಕಳೆಯುತ್ತಿದ್ದರೂ ನಿವೇಶನ ಸಿಗದೆ, ತಾವು ಕಟ್ಟಿದ ಮುಂಗಡ ಹಣವೂ ಇಲ್ಲದೆ ಅತಂತ್ರರಾಗಿದ್ದಾರೆ.

ನಾನಾ ಕಾರಣದಿಂದ ನಿಯಮ ಉಲ್ಲಂಘನೆ ಮಾಡಿದ್ದ ನಿವೇಶನದಾರರಿಂದ ದೇವನೂರು ಮೂರನೇ ಹಂತದಲ್ಲಿ ವಾಪಸ್‌ ಪಡೆಯಲಾದ 188 ನಿವೇಶನ ಗಳನ್ನು ಎಚ್‌.ಕೆಟಗರಿಯಲ್ಲಿ ಬಿಡಿ ನಿವೇಶನಗಳಾಗಿ ಸಾಧಕರಿಗೆ ಹಂಚಿಕೆ ಮಾಡಲಾಗುತ್ತಿದೆ. ಅದಕ್ಕಾಗಿ 2023ರ ಫೆ. 12ರಂದು ಅರ್ಜಿ ಆಹ್ವಾನಿಸಲಾಗಿತ್ತು. ಸಿನಿಮಾ ನಿರ್ದೇಶಕ ಯೋಗರಾಜ್‌ ಭಟ್‌, ಹಿರಿಯ ನಟ ಸುಂದರ್‌ ರಾಜ್‌, ಏಕಲವ್ಯ ಪ್ರಶಸ್ತಿ ಪಡೆದ ಕ್ರೀಡಾ ಸಾಧಕರು, ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು ಸೇರಿದಂತೆ ಒಟ್ಟು 578 ಮಂದಿ ಲಕ್ಷಾಂತರ ರೂ. ಮುಂಗಡ ಹಣ ಕಟ್ಟಿ ಅರ್ಜಿ ಸಲ್ಲಿಸಿದ್ದಾರೆ. ಬಂದ ಅರ್ಜಿಗಳನ್ನು ವಿಂಗಡಣೆ ಮಾಡಿರುವುದನ್ನು ಬಿಟ್ಟರೆ ಮುಂದಿನ ಪ್ರಕ್ರಿಯೆ ನಡೆದಿಲ್ಲ.

69 ಮೀಟರ್‌ ಅಳತೆಯ ನಿವೇಶನಾಕಾಂಕ್ಷಿಗಳು 5,23,000 ರೂ. ಮೊತ್ತದ ನಿವೇಶನಕ್ಕೆ 52,300 ರೂ.ಗಳನ್ನು ಮುಂಗಡವಾಗಿ ಇಎಂಡಿ ಕಟ್ಟಿದ್ದಾರೆ. 912 ಮೀ. ಅಳತೆಗೆ 10,46,000 ರೂ. ಮೊತ್ತಕ್ಕೆ 1,04,600 ರೂ. ಪಾವತಿಸಿದ್ದಾರೆ. 1218 ಮೀ. ಅಳತೆ ನಿವೇಶನಕ್ಕೆ 20,92,000 ರೂ. ನಿಗದಿಯಾಗಿದ್ದು, ಮುಂಗಡವಾಗಿ 2,09,200 ರೂ. ಪಡೆಯಲಾಗಿದೆ. 1524 ಮೀ. ಅಳತೆಯ ನಿವೇಶನಕಾಂಕ್ಷಿಗಳು 34,86,000 ರೂ.ಬೆಲೆಯ ನಿವೇಶನಕ್ಕೆ ಮುಂಗಡವಾಗಿ 3,48,600 ರೂ. ಪಾವತಿಸಿದ್ದಾರೆ. ಹೀಗೆ ಲಕ್ಷಾಂತರ ರೂ. ಮುಂಗಡ ಹಣವನ್ನು ಕಷ್ಟಪಟ್ಟು ಹೊಂದಿಸಿ ಪಾವತಿಸಿದವರು ನಿವೇಶನ ಹಂಚಿಕೆ ವಿಳಂಬದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

Comments (0)

Your email address will not be published. Required fields are marked *

Back to top button