ಗರ್ಭಿಣಿಯರ ತಪಾಸಣೆ ಮತ್ತು ಆರೈಕೆ, ನವಜಾತ ಶಿಶುಗಳ ಆರೈಕೆ, ಶಿಶುಗಳಿಗೆ ಚಿಕಿತ್ಸೆ, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯ ಕಾಳಜಿ, ಲಸಿಕೆ ಸೇವೆ, ಕುಟುಂಬ ನಿಯಂತ್ರಣ, ಸೋಂಕು ರೋಗಗಳ ನಿರ್ವಹಣೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿರ್ವಹಣೆ, ಸಣ್ಣಪುಟ್ಟ ಗಾಯಗಳಿಗೆ ಆರೈಕೆ, ಮರುಕಳಿಸುವ ಕಾಯಿಲೆಗಳು ಸೇರಿವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಸಮಸ್ಯೆಗಳಿಗೆ ಸಂಬಂಧಿಸಿದ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳನ್ನೂ ಉಚಿತವಾಗಿ ಒದಗಿಸಲಾಗುವುದು.
ವಯೋವೃದ್ಧರ ಆರೈಕೆ, ತುರ್ತು ವೈದ್ಯಕೀಯ ಸೇವೆಗಳು, ಅರೋಗ್ಯ ತಪಾಸಣೆ ಮತ್ತು ಔಷಧಿಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು. 14 ಬಗೆಯ ಲ್ಯಾಬ್ ಟೆಸ್ಟ್ಗಳು, ಟೆಲಿ ಕನ್ಸಲ್ಟೇಶನ್ ಸೌಲಭ್ಯ, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಸಲಹೆಗಳು ಉಚಿತವಾಗಿ ದೊರೆಯುತ್ತವೆ. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ನಮ್ಮ ಕ್ಲಿನಿಕ್ಗಳು ಕಾರ್ಯನಿರ್ವಹಿಸುತ್ತವೆ. ಜನವಸತಿಗಳಿಗೆ ಹತ್ತಿರದಲ್ಲಿ ಕ್ಲಿನಿಕ್ಗಳನ್ನು ಆರಂಭಿಸುವುದರಿಂದ ಜನರಿಗೆ ಆರೋಗ್ಯ ಸೇವೆಗಳು ಸುಲಭವಾಗಿ ಸಿಗಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಸರ್ಕಾರಿ ಆಸ್ಪತ್ರೆಗಳ ಮೇಲಿರುವ ಒತ್ತಡವೂ ಕಡಿಮೆಯಾಗುತ್ತದೆ.
ಬಡತನ ರೇಖೆಗಿಂತ ಕೆಳಗಿರುವ ಜನರು, ಗುಡಿಸಲುಗಳಲ್ಲಿ ವಾಸಿಸುವ ಕಡು ಬಡವರಿಗಾಗಿ ಈ ಯೋಜನೆ ರೂಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಂತೆಯೇ ಇದು ಕಾರ್ಯ ನಿರ್ವಹಿಸಲಿದೆ. ಪ್ರತಿ ವಾರ್ಡ್‌ನಲ್ಲಿ ಒಂದು ಕ್ಲಿನಿಕ್ ಆರಂಭವಾಗುವುದರಿಂದ ಜನರಿಗೆ ಆರೋಗ್ಯ ಹಾಗೂ ಸರ್ಕಾರಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಹೆಚ್ಚಲಿದೆ ಎಂಬುದು ಸರ್ಕಾರದ ಉದ್ದೇಶ.
ಸರ್ಕಾರಿ ಕಟ್ಟಡಗಳಲ್ಲಿ, ಬಾಡಿಗೆ ಕಟ್ಟಡಗಳಲ್ಲಿ 1,000-1,200 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಕ್ಲಿನಿಕ್ ರೂಪಿಸಲಾಗುತ್ತಿದೆ. ಪ್ರತಿ ವರ್ಷ ಸಿಬ್ಬಂದಿಗಾಗಿ 138 ಕೋಟಿ ರೂ. ವೆಚ್ಚವಾಗಲಿದೆ. ನಾನ್ ರಿಕರಿಂಗ್ 17.52 ಕೋಟಿ ರೂ. ಸೇರಿ ಒಟ್ಟು 155 ಕೋಟಿ ರೂ. ವೆಚ್ಚವಾಗಲಿದೆ. ಯೋಗ, ಪ್ರಾಣಾಯಾಮ, ಧ್ಯಾನ, ಆಹಾರ ಪದ್ಧತಿ ಮೊದಲಾದವುಗಳ ಕುರಿತು ಕ್ಲಿನಿಕ್ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.