ನವದೆಹಲಿ :ಕೆಲವು ದಿನಗಳ ಹಿಂದಷ್ಟೇ ಟೀಮ್ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ ಅವರ ಮನೆಯಿಂದ ಮೊಬೈಲ್ ಕಳ್ಳತನವಾಗಿತ್ತು. ಇದೀಗ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಪಂಚಕುಲದ ಎಂಡಿಸಿ ಸೆಕ್ಟರ್ 4ರಲ್ಲಿರುವ ನಿವಾಸದಲ್ಲಿ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯಲ್ಲಿದ್ದ 75 ಸಾವಿರ ನಗದು ಹಾಗೂ ಚಿನ್ನಾಭರಣಗಳನ್ನು ಕಳವಾಗಿದೆ ಎಂದು ಯುವರಾಜ್ ಸಿಂಗ್ ತಾಯಿ ಶಬ್ನಮ್ ಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜತೆಗೆ ಮನೆಗೆಲಸದ ಸಿಬ್ಬಂದಿಗಳಾದ ಲಲಿತಾ ದೇವಿ ಮತ್ತು ಬಿಹಾರ ಮೂಲದ ಅಡುಗೆ ಸಿಬಂದಿ ಸಿಲ್ದಾರ್ ಪಾಲ್ ಅವರ ಮೇಲೆ ಅನುಮಾನವಿದೆ ಎಂದು ಹೇಳಿಕೊಂಡಿದ್ದಾರೆ.
ಶಬ್ನಮ್ ಸಿಂಗ್ ಹೇಳಿಕೆ ಪ್ರಕಾರ, ಸೆಪ್ಟೆಂಬರ್ 2023 ರಿಂದ ಗುರ್ಗಾಂವ್‌ನಲ್ಲಿರುವ ತಮ್ಮ ಎರಡನೇ ನಿವಾಸದಲ್ಲಿ ವಾಸಿಸುತ್ತಿದ್ದರು ಬಳಿಕ ಅಕ್ಟೋಬರ್ 5, 2023 ರಂದು ಅವರು ಪಂಚಕುಲದ ಮನೆಗೆ ಹಿಂದಿರುಗಿದ್ದಾರೆ, ಈ ವೇಳೆ ಮನೆಯಲ್ಲಿದ್ದ ಸುಮಾರು 75,000 ರೂಪಾಯಿ ಮೌಲ್ಯದ ಆಭರಣಗಳು ಮತ್ತು ಇತರ ವಸ್ತುಗಳು ಕಪಾಟಿನಲ್ಲಿ ಕಾಣೆಯಾಗಿವೆ ಎಂದು ಹೇಳಿದ್ದಾರೆ.
ಇದೇ ಹೊತ್ತಿಗೆ ಮನೆಕೆಲಸದ ಸಿಬ್ಬಂದಿಗಳಾದ ಲಲಿತಾ ದೇವಿ ಮತ್ತು ಸಿಲ್ದಾರ್ ಪಾಲ್ ಇದ್ದಕ್ಕಿದ್ದಂತೆ ತಮ್ಮ ಕೆಲಸವನ್ನು ತೊರೆದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಕಳ್ಳತನವಾದ ವಿಚಾರದಲ್ಲಿ ಮನೆಕೆಲಸದ ಸಿಬ್ಬಂದಿಗಳ ಕೈಚಳಕ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದು ಕೂಲಂಕುಷ ವಿಚಾರಣೆ ನಡೆಸಬೇಕೆಂದು ಪೊಲೀಸರಲ್ಲಿ ಒತ್ತಾಯಿಸಿದ್ದಾರೆ. ಅಚ್ಚರಿ ಎಂದರೆ 2023ರಲ್ಲಿ ಕಳವಾಗಿದ್ದರೂ ಕೂಡ ದೂರು ನೀಡಲು ಇಷ್ಟು ತಡ ಮಾಡಿದ್ದು ಏಕೆ ಎನ್ನುವುದು ತಿಳಿದುಬಂದಿಲ್ಲ.