ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಎದುರಿಸುತ್ತಿರುವ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರನ್ನು ಬಂಧನವಾಗಿದ್ದು, ಬೆಂಗಳೂರಿಗೆ ಕರೆ ತರಬೇಕಿದೆ. ಆದರೆ, ಪೊಲೀಸರು ರಾತ್ರಿ ಇಡೀ ಕಾರಿನಲ್ಲೇ ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಕರೆದೊಯ್ಯುತ್ತಾ ಕಾಲಹರಣ ಮಾಡಿದ್ದಾರೆ. ಖಾನಾಪುರ ಠಾಣೆಯಿಂದ ಸಿ.ಟಿ.ರವಿರನ್ನು ಕರೆತಂದಿದ್ದ ಪೊಲೀಸರು, ಬೆಂಗಳೂರಿಗೆ ಶಿಫ್ಟ್ ಮಾಡುತ್ತೇವೆ ಅಂತೇಳಿ ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಕರೆದೊಯ್ಯುತ್ತಾ ಪೊಲೀಸರು ಸುತ್ತಾಡಿದ್ದಾರೆ.
ಸಿಟಿ ರವಿ ಅವರ ತಲೆಗೆ ಪೆಟ್ಟು ಬಿದ್ದು ರಕ್ತ ಸುರಿದಿದ್ದರೂ ಕ್ಯಾರೆ ಎನ್ನದ ಪೊಲೀಸರು ಕಿತ್ತೂರು, ಧಾರವಾಡ, ಸವದತ್ತಿ, ರಾಮದುರ್ಗ, ಲೋಕಾಪುರದಲ್ಲಿ ಸುತ್ತಾಡಿದ್ದಾರೆ. ರಾಮದುರ್ಗ ಬರುತ್ತಿದ್ದಂತೆ ಪೊಲೀಸರ ನಡೆಗೆ ಆಕ್ರೋಶಗೊಂಡ ಸಿ.ಟಿ.ರವಿ ಅವರು, ರಾಮದುರ್ಗ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಧರಣಿಗೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
“ನನ್ನನ್ನು ಇಲ್ಲಿಗೆ ಯಾಕೆ ಕರ್ಕೊಂಡು ಬಂದ್ರಿ, ನಿಮ್ಮ ಉದ್ದೇಶ ಇರೋದೆ ನನ್ನ ಮರ್ಡರ್ ಮಾಡೋಕೆ, ನನ್ನ ಶೂಟ್ ಮಾಡಿ ಸಾಯಿಸಿ, ಯಾಕೆ ಹೀಗೆ ರಾತ್ರಿ ಸುತ್ತಾಡಿಸುತ್ತಿದ್ದೀರಿ? ಜಡ್ಜ್ ಮುಂದೆ ಹಾಜರುಪಡಿಸುವ ಬದಲು ಓಡಾಡ್ತಿರೋದ್ಯಾಕೆ? ಕಸ್ಟಡಿಗೆ ತೆಗೆದುಕೊಂಡಿಲ್ಲ, ನನ್ನ ಕೊಲೆ ಮಾಡೋಕೆ ಹೊರಟಿದ್ದೀರಾ? ನೀವು ಕೊಲೆ ಮಾಡುವ ಸಂಚು ನಡೆಸಿದ್ದೀರಿ. 11 ಗಂಟೆಯಿಂದ ಖಾನಾಪುರದಿಂದ ಯಾಕೆ ಸುತ್ತಿಸಿಕೊಂಡು ಬಂದ್ರಿ” ಎಂದು ಪೊಲೀಸರ ವಿರುದ್ಧ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.