ನಟ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಕೊತ್ತಲವಾಡಿ ಸಿನಿಮಾದ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದು, ಈಗ ವಿತರಣಾ ವಲಯಕ್ಕೆ ಅಡಿಯಿಟ್ಟಿದ್ದಾರೆ.
ಯಶ್ ತಾಯಿಯ ಈ ನಡೆಯು ಸಿನಿ ಪ್ರಿಯರಿಗೆ ಅಚ್ಚರಿ ತಂದಿದೆ. ಒಂದೇ ಒಂದು ಸಿನಿಮಾ ಮಾಡಿರೋ ಪುಷ್ಪ, ವಿತರಣೆ ಹೇಗೆ ಮಾಡ್ತಾರೆ ಅನ್ನೋ ಕುತೂಹಲ ಕೂಡ ಮೂಡಿದೆ. ಕೊತ್ತಲವಾಡಿ ಸಿನಿಮಾದ ಪ್ರಮೋಷನ್‌ಗಾಗಿ ಪುಷ್ಪ ಅವರು ಹಲವು ಸಂದರ್ಶನಗಳನ್ನು ನೀಡಿದ್ದು, ನೇರಾ- ನೇರ ಮಾತುಗಳನ್ನು ಹೇಳುವ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದರು.
ಯಶ್ ತಾಯಿ ನಿರ್ಮಾಣ ಮಾಡಿದ ಮೊದಲ ಚಿತ್ರ ಅಷ್ಟು ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಸಿನಿಮಾ ಸೋತರೂ ಪುಷ್ಪ ಅವರು ಎದೆಗುಂದದೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಎಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಥ್ರೂ ಶ್ರೀಧರ್ ಕೃಪಾ ಕಂಬೈನ್ಸ್ ಮೂಲಕ ಇದೇ ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಘಾಟಿ ಚಿತ್ರವನ್ನು ಪುಷ್ಪ ಅರುಣ್ ಕುಮಾರ್ ಅವರು ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 5 ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಫಾಟಿ ಚಿತ್ರದ ಮೂಲಕ ಸಿನಿಮಾ ವಿತರಣೆ ಆರಂಭಿಸುತ್ತಿದ್ದೇವೆ. ಮುಂದೆ ಕೂಡ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳನ್ನು PA ಪ್ರೊಡಕ್ಷನ್ಸ್ ಮೂಲಕ ವಿತರಣೆ ಮಾಡುತ್ತೇವೆ. ಚಿತ್ರ ನಿರ್ಮಾಣಕ್ಕೆ ಬಂದಾಗ ತಾವು ತೋರಿದ ಪ್ರೀತಿಗೆ ಅನಂತ ಧನ್ಯವಾದ. ಈಗ ವಿತರಕಿಯಾಗಿ ಹೊಸ ಹೆಜ್ಜೆ ಇಡುತ್ತಿದ್ದೇನೆ. ತಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಪುಷ್ಪ ಅರುಣ್ ಕುಮಾರ್ ತಿಳಿಸಿದ್ದಾರೆ.