ಬೆಂಗಳೂರು: ಸು ಫ್ರಮ್ ಸೋ ಸಿನಿಮಾ ಜುಲೈ 25 ರಂದು ತೆರ ಮೇಲೆ ಬಂದಿದ್ದು, ಸಿನಿಮಾನ ನಾಗಾಲೋಟ ಮುಂದುವರಿದಿದೆ. ದಿನದಿಂದ ದಿನಕ್ಕೆ ಈ ಸಿನಿಮಾ ನೋಡುಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾರರ್ ಕಾಮಿಡಿ ಕಥೆ ಇರುವ ಈ ಚಿತ್ರವನ್ನು ಪ್ರೇಕ್ಷಕರು ಸಖತ್ ಇಷ್ಟಪಡುತ್ತಿದ್ದಾರೆ.
ವಿಶೇಷವಾಗಿ ಫ್ಯಾಮಿಲಿ ಪ್ರೇಕ್ಷಕರು ಬಂದು ಸಿನಿಮಾ ನೋಡುತ್ತಿದ್ದಾರೆ. ಮತ್ತೆ ಮತ್ತೆ ಸಿನಿಮಾ ನೋಡುವವರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಸು ಫ್ರಮ್ ಸೋ ಸಿನಿಮಾಗೆ ಎರಡನೇ ಶನಿವಾರ ಕೂಡ ಉತ್ತಮ ಕಲೆಕ್ಷನ್ ಆಗಿದೆ. ಹೊಸ ಸಿನಿಮಾಗಳ ಪೈಪೋಟಿ ನಡುವೆಯೂ ಈ ಸಿನಿಮಾ ಕಮಾಲ್ ಮಾಡುತ್ತಿದೆ.
ಇದೀಗ ಈ ಸಿನಿಮಾ ಬಗ್ಗೆ ಸಾಹಿತಿ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟ್ವೀಟ್ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಇದು ಪವಾಡ. ಲೋಕ ಮೆಚ್ಚುತ್ತಿರುವ ಪವಾಡ. ಕನ್ನಡ ಉದ್ಯಮ ಒಂದೇ ಒಂದು organic ಆದ HOUSE FULL ಫಲಕಕ್ಕೆ ಹಪಹಪಿಸುತ್ತಿದ್ದಾಗ ಸೋಮೇಶ್ವರದಿಂದ ಬಂದ ಸುಲೋಚನಾ ಎಂಬ ಗಂಡುರೂಪದ ಹೆಣ್ಣುದೆವ್ವ, ವಿಶ್ವಾದ್ಯಂತ HOUSE FULL ಮಾಡಿ ಕೆಜಿಎಫ್, ಕಾಂತಾರಗಳ ನಂತರ ಇಡೀ ಜಗತ್ತು ಕನ್ನಡದತ್ತ ತಿರುಗಿ ನೋಡುವಂತೆ ಭಯಂಕರ ಪವಾಡ ಮಾಡಿದ್ದಾಳೆ.
ವಿಶಾಲ ಪರದೆಯ ಬಗ್ಗೆ ಪ್ರೇಕ್ಷಕನ ಮೋಹ ಮರೆಯಾಗುವುದಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ. ಈ ಚಿತ್ರ ನೋಡಿ ಖುಷಿಪಟ್ಟೆ. ಎಲ್ಲ ಖುಷಿಪಡುವ ಕ್ಷಣ ಇದು. ತಂಡದ ಗೆಳೆಯರಿಗೆ ಅಭಿನಂದನೆ. ಸರೀಕರಿಗೆ ವಿನಯಪೂರ್ವಕ ಕಿವಿಮಾತುಃ ಸಾಲಾದ ದೆವ್ವದ ಕತೆಗಳು ಬಾರದಿರಲಿ.ಯಶಸ್ಸು ಕುರುಡು ಅನುಕರಣೆಯಿಂದ ಬರದು. ಸೃಜನಶೀಲ ಜಾಣ್ಮೆ ಮಾತ್ರ ನಮ್ಮನ್ನು ಉಳಿಸಬಲ್ಲುದು ಎಂದು ಬರೆದುಕೊಂಡಿದ್ದಾರೆ.


