
ಕಲಬುರ್ಗಿ: ಭಾರತ ತಂಡವು ಟಿ20 ವಿಶ್ವಕಪ್ ಜಯಿಸಿದ ಐತಿಹಾಸಿಕ ಕ್ಷಣವನ್ನು ಕಲಬುರಗಿ ನಗರದ ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಸಡಗರದಿಂದ ಸಂಭ್ರಮಿಸಿದ್ದಾರೆ. ಪ್ರಮುಖ ಕೇಂದ್ರವಾದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಅಭಿಮಾನಿಗಳು, ಅಸಲಿ ವಿಶ್ವಕಪ್ ಅನ್ನು ಹೋಲುವ ಬೃಹತ್ ಮಾದರಿ ಟಿ20 ಕಿರೀಟವನ್ನು ಪ್ರದರ್ಶಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ಸಂಭ್ರಮದ ಮೆರವಣಿಗೆಯು ಇಡೀ ನಗರದಾದ್ಯಂತ ಕ್ರೀಡಾ ಪ್ರೇಮಿಗಳ ಗಮನ ಸೆಳೆಯಿತು.
ಈ ವಿಜಯೋತ್ಸವದ ವೇಳೆ ಅಭಿಮಾನಿಯೊಬ್ಬರು ಕಾರಿನ ಸನ್‌ರೂಫ್‌ನಲ್ಲಿ ವಿಶ್ವಕಪ್ ಮಾದರಿಯನ್ನು ಎತ್ತಿ ಹಿಡಿದು ನಿಂತು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಈ ದೃಶ್ಯವನ್ನು ನೋಡಲು ಮತ್ತು ವಿಶ್ವಕಪ್ ಮಾದರಿಯೊಂದಿಗೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿದ್ದರು. ಭಾರತದ ಗೆಲುವಿನ ಸಂಕೇತವಾಗಿ ಅಭಿಮಾನಿಗಳು ಘೋಷಣೆಗಳನ್ನು ಕೂಗುತ್ತಾ, ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ಇಡೀ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತವನ್ನು ಹಬ್ಬದಂತೆ ಮಾಡಿದರು.
ಸಂಭ್ರಮಾಚರಣೆಯು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದ್ದು, ಟೀಮ್ ಇಂಡಿಯಾ ಮೇಲಿನ ಅಭಿಮಾನಿಗಳ ಅಪಾರ ಪ್ರೀತಿಯನ್ನು ಮೆರೆದಿದೆ. ವಿಶ್ವ ವಿಜೇತ ಭಾರತ ತಂಡದ ಈ ಸಾಧನೆಯು ಯುವ ಸಮೂಹದಲ್ಲಿ ಹೊಸ ಚೈತನ್ಯ ತುಂಬಿದ್ದು, ಇಂದಿಗೂ ನಗರದಾದ್ಯಂತ ಗೆಲುವಿನ ಅಲೆ ಮುಂದುವರಿದಿದೆ.




