AI ಬಳಕೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಸಾಟಿ!

ಭಾರತೀಯ ವೃತ್ತಿಪರ ಮಹಿಳೆಯರು ತಂತ್ರಜ್ಞಾನ ಲೋಕದಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿದ್ದು, ಕೃತಕ ಬುದ್ಧಿಮತ್ತೆ (AI) ಬಳಕೆಯಲ್ಲಿ ಪುರುಷರಿಗಿಂತಲೂ ಹೆಚ್ಚು ಆತ್ಮವಿಶ್ವಾಸ ಪ್ರದರ್ಶಿಸುತ್ತಿದ್ದಾರೆ. ಲಿಂಕ್ಡ್‌ಇನ್ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಶೇ. 90ರಷ್ಟು ಭಾರತೀಯ ಮಹಿಳಾ ವೃತ್ತಿಪರರು ತಮ್ಮ ಕೆಲಸದ ಸ್ಥಳದಲ್ಲಿ AI ಪರಿಕರಗಳನ್ನು ಬಳಸಲು ಸಿದ್ಧರಿದ್ದಾರೆ. ವಿಶೇಷವೆಂದರೆ, ಪುರುಷರಲ್ಲಿ ಈ ಆತ್ಮವಿಶ್ವಾಸದ ಪ್ರಮಾಣವು ಶೇ. 86ರಷ್ಟಿದ್ದು, ಮಹಿಳೆಯರು ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬುದು ಅಚ್ಚರಿಯ ಹಾಗೂ ಹೆಮ್ಮೆಯ ಸಂಗತಿಯಾಗಿದೆ.
ಕೆಲಸದ ಸ್ಥಳದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದ ಅಲೆಗಳನ್ನು ಅಪ್ಪಿಕೊಳ್ಳಲು ಭಾರತೀಯ ನಾರಿಯರು ಸಜ್ಜಾಗುತ್ತಿದ್ದು, ಹೊಸ ಕೌಶಲ್ಯಗಳನ್ನು ಕಲಿಯಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಈಗಾಗಲೇ ಶೇ. 35ರಷ್ಟು ಮಹಿಳೆಯರು ಸಕ್ರಿಯವಾಗಿ AI ಸಂಬಂಧಿತ ಕೌಶಲ್ಯಗಳನ್ನು ಕಲಿಯುತ್ತಿದ್ದು, ಉತ್ತಮ ಉದ್ಯೋಗಾವಕಾಶಗಳಿಗಾಗಿ ಈ ಆಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಸಂವಹನ ಮತ್ತು ಸೃಜನಶೀಲತೆಯಂತಹ ‘ಸಾಫ್ಟ್ ಸ್ಕಿಲ್ಸ್’ ಜೊತೆಗೆ AI ತಂತ್ರಜ್ಞಾನವನ್ನು ಮಿಲನಗೊಳಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಅವರು ಶ್ರಮಿಸುತ್ತಿದ್ದಾರೆ.
ಈ ಬದಲಾವಣೆಯು ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳೆಯರ ಪ್ರಾಬಲ್ಯವನ್ನು ಹೆಚ್ಚಿಸುತ್ತಿದೆ. ವರದಿಯ ಪ್ರಕಾರ, ಭಾರತೀಯ ಮಹಿಳೆಯರ ಉದ್ಯೋಗ ಸನ್ನದ್ಧತೆ ಶೇ. 54ಕ್ಕೆ ಏರಿಕೆಯಾಗಿದ್ದು, ಪುರುಷರ ಉದ್ಯೋಗ ಸನ್ನದ್ಧತೆಯ (ಶೇ. 51.5) ಪ್ರಮಾಣವನ್ನು ಹಿಂದಿಕ್ಕಿದ್ದಾರೆ. ಇದರರ್ಥ, ಕಂಪನಿಗಳು ಈಗ ತಾಂತ್ರಿಕವಾಗಿ ಹೆಚ್ಚು ಅಪ್‌ಡೇಟ್ ಆಗಿರುವ ಮಹಿಳಾ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಹೆಚ್ಚು ಆಸಕ್ತಿ ವಹಿಸುತ್ತಿವೆ. ಭಾರತದ AI ಟ್ಯಾಲೆಂಟ್ ಪೂಲ್‌ನಲ್ಲಿ ಮಹಿಳೆಯರ ಪಾತ್ರ ಈಗ ಅತ್ಯಂತ ನಿರ್ಣಾಯಕವಾಗಿದೆ.
ಭವಿಷ್ಯದ ಕೆಲಸದ ಮಾರುಕಟ್ಟೆಯಲ್ಲಿ ಮಹಿಳಾ ವೃತ್ತಿಪರರೇ ‘ಕಿಂಗ್ ಮೇಕರ್ಸ್’ ಆಗಿ ಹೊರಹೊಮ್ಮಲಿದ್ದಾರೆ ಎಂಬುದು ಈ ದತ್ತಾಂಶಗಳಿಂದ ಸಾಬೀತಾಗಿದೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ತಮ್ಮನ್ನು ತಾವು ಅಪ್‌ಗ್ರೇಡ್ ಮಾಡಿಕೊಳ್ಳುತ್ತಿರುವ ಭಾರತೀಯ ನಾರಿಯರ ಈ ಸಾಧನೆಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕೇವಲ ಮನೆಯ ಜವಾಬ್ದಾರಿಯಲ್ಲದೆ, ಅತ್ಯಾಧುನಿಕ ತಂತ್ರಜ್ಞಾನದ ಹಾದಿಯಲ್ಲೂ ಮಹಿಳೆಯರು ದಾಖಲೆ ಬರೆಯುತ್ತಿರುವುದು ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗಿದೆ.



