ಜಿಲ್ಲೆಸುದ್ದಿ

ರಥದ ಚಕ್ರಕ್ಕೆ ಸಿಲುಕಿ ಮಹಿಳೆಯ ಕಾಲುಗಳು ಕಟ್!

ಕಲಬುರ್ಗಿ: ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆಯುತ್ತಿದ್ದ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ರಥೋತ್ಸವ ಜರುಗುತ್ತಿದ್ದ ಸಂದರ್ಭದಲ್ಲಿ ರಥದ ಚಕ್ರಕ್ಕೆ ಸಿಲುಕಿ ನಾಗಮ್ಮ ಎಂಬ ಭಕ್ತೆಯ ಎರಡು ಕಾಲುಗಳು ಕಟ್ ಆಗಿರುವ ದಾರುಣ ಘಟನೆ ನಡೆದಿದೆ. ಸಂಭ್ರಮದಿಂದ ಸಾಗುತ್ತಿದ್ದ ಜಾತ್ರೆಯಲ್ಲಿ ಈ ಅಪಘಾತವು ಭಕ್ತರಲ್ಲಿ ತೀವ್ರ ಆತಂಕ ಹಾಗೂ ಮರುಕವನ್ನುಂಟು ಮಾಡಿದೆ.

ಶರಣಬಸವೇಶ್ವರ ರಥೋತ್ಸವ ಆರಂಭವಾಗುತ್ತಿದ್ದಂತೆಯೇ ನೆರೆದಿದ್ದ ನೂರಾರು ಭಕ್ತರು ರಥವನ್ನು ಅತ್ಯಂತ ರಭಸದಿಂದ ಎಳೆಯಲು ಮುಂದಾಗಿದ್ದಾರೆ. ಈ ವೇಳೆ ರಥವು ಜನರು ನಿಂತಿದ್ದ ದಿಕ್ಕಿಗೆ ಚಲಿಸಿದ ಪರಿಣಾಮ, ಅಲ್ಲಿಯೇ ಇದ್ದ ನಾಗಮ್ಮ ಎಂಬಾಕೆಯ ಮೇಲೆ ರಥದ ಬೃಹತ್ ಚಕ್ರ ಹರಿದಿದೆ. ಈ ಭೀಕರ ಅಪಘಾತದಲ್ಲಿ ಗಾಯಾಳು ಮಹಿಳೆಯ ಎರಡು ಕಾಲುಗಳು ಸ್ಥಳದಲ್ಲೇ ತುಂಡಾಗಿವೆ. ಕೂಡಲೇ ಗಾಯಾಳುವನ್ನು ರಕ್ಷಿಸಿದ ಸ್ಥಳೀಯರು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜಾತ್ರೆಯ ಸಂಭ್ರಮದ ನಡುವೆ ನಡೆದ ಈ ಅಚಾತುರ್ಯವು ಸುರಕ್ಷತಾ ಕ್ರಮಗಳ ಕೊರತೆಯನ್ನು ಎತ್ತಿ ತೋರಿಸಿದೆ. ರಥೋತ್ಸವದ ವೇಳೆ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಉಂಟಾದ ಸಣ್ಣ ಅತಪ್ಪಿನಿಂದಾಗಿ ದೊಡ್ಡ ದುರಂತ ಸಂಭವಿಸಿದ್ದು, ಸದ್ಯ ಗಾಯಾಳು ಮಹಿಳೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button