ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಈ ಬೆನ್ನಲ್ಲೇ ಒಲಿಂಪಿಕ್ಸ್ ಪಂದ್ಯದಲ್ಲಿ ಹೆಚ್ಚುವರಿ ತೂಕದಿಂದ ಅನರ್ಹಗೊಂಡಿದ್ದ ಕುಸ್ತಿಪಟು ವಿನೇಶ್ ಫೋಗಟ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಹರಿಯಾಣ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಫೋಗಟ್ ಕುಟುಂಬವನ್ನು ಭೇಟಿಯಾಗಿದ್ದು ಇದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.
ಈವರೆಗೂ ದೀಪೇಂದರ್ ಹೂಡಾ ಮೂರು ಬಾರಿ ಫೋಗಟ್ ಕುಟುಂಬವನ್ನು ಭೇಟಿಯಾಗಿ ನಿರಂತರ ಸಂರ್ಕದಲ್ಲಿದ್ದಾರೆ. ವಿನೇಶ್ ಅವರನ್ನು ಭೇಟಿಯಾದ ಫೋಟೋವನ್ನು ಹೂಡಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿನೇಶ್ ಶೀಘ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪಕ್ಷದ ಇತರ ನಾಯಕರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ವಿನೇಶ್ ಅಥವಾ ಕುಟುಂಬದವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿನೇಶ್ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಹೂಡಾ, ವಿನೇಶ್ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತು ಕಾಲ್ಪನಿಕ. ಕ್ರೀಡಾಪಟುಗಳು ಇಡೀ ದೇಶಕ್ಕೆ ಸೇರಿದವರು. ಅವರು ರಾಜಕೀಯ ಪಕ್ಷಕ್ಕೆ ಸೇರಿದರೆ ಅದು ಗೊತ್ತಾಗುತ್ತದೆ. ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದರು.