ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ವಿರಾಟ್ ಕೊಹ್ಲಿ ಅವರೇ ಮತ್ತೆ ನಾಯಕ ಆಗ್ತಾರಾ? ಹೀಗೊಂದು ಸಾಧ್ಯತೆಯ ಬಗ್ಗೆ ಕ್ರಿಕೆಟ್ ವಲಯದಲ್ಲಿ ಮಾತು ಕೇಳಿ ಬರುತ್ತಿದೆ. ಅವರೇ ಬೇಡ ಎಂದು ಬಿಟ್ಟುಕೊಟ್ಟ ನಾಯಕತ್ವವನ್ನು ಅವರು ಮತ್ತೆ ತೆಗೆದುಕೊಳ್ತಾರಾ? ಆದರೆ ಅವರನ್ನು ಬಿಟ್ಟರೆ ಇದೀಗ ಬೇರೆ ಉತ್ತಮ ಆಯ್ಕ ಫ್ರಾಂಚೈಸಿಯ ಮುಂದೆ ಇಲ್ಲ ಎಂದೇ ಹೇಳಲಾಗುತ್ತಿದೆ.
ಬಹುಷಃ ನಾಯಕನ ಬಗ್ಗೆ ಇಂಥದ್ದೊಂದು ಗೊಂದಲ ಯಾವುದೇ ಫ್ರಾಂಚೈಸಿಯಲ್ಲೂ ಇರಲಾರದು. 2008ರಿಂದ ಈವರೆಗೂ ಒಂದೇ ಒಂದು ಬಾರಿಯೂ ಐಪಿಎಲ್ ಟೂರ್ನಿ ಗೆಲ್ಲದ ಆರ್ ಸಿಬಿಗೆ ಈಗ ಕ್ಯಾಪ್ಟನ್ ಯಾರಾಗಬೇಕು ಎಂಬುದೇ ಚರ್ಚೆ. ಇದಕ್ಕೆ ಕಾರಣ ಇಲ್ಲದಿಲ್ಲ. ಈಗ ನಾಯಕರಾಗಿರುವ ಫಾಫ್ ಡುಪ್ಲೆಸಿಗೆ 40 ವರ್ಷ ಆಗಿದೆ. ಈ ವರ್ಷದವರೆಗೋ, ಮುಂದಿನ ವರ್ಷಕ್ಕೋ ಅವರನ್ನು ನಾಯಕರನ್ನಾಗಿ ಮಾಡಲು ಸಹ ಅಡ್ಡಿ ಇಲ್ಲ. ಯಾಕೆಂದರೆ ಅವರಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ. ಆದರೆ ಆರ್ ಸಿಬಿಯ ಭವಿಷ್ಯದ ದೃಷ್ಟಿಯಿಂದ ದೀರ್ಘಕಾಲದವರೆಗೆ ಅವರನ್ನು ನಾಯಕರನ್ನಾಗಿ ಆಡಿಸುವುದು ಅಸಾಧ್ಯ .
ದೀರ್ಘಕಾಲ ಫ್ಲೆಸಿಸ್ ಗೆ ನಾಯಕತ್ವ ಅಸಾಧ್ಯ
ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅವರು ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದು ಅಲ್ಲಿ ಉತ್ತಮವಾಗಿ ಬ್ಯಾಟ್ ಸಹ ಬೀಸುತ್ತಿದ್ದಾರೆ. ಆದರೆ ಐಪಿಎಲ್ ನ ರಿಟೆನ್ಶನ್ ಸ್ಲ್ಯಾಬ್ ಮತ್ತು ಅವರ ವಯಸ್ಸು ಅವರು ದೀರ್ಘಕಾಲ ಆರ್ ಸಿಬಿ ನಾಯಕರಾಗಿ ಮುಂದುವರಿಯಲು ಅಡ್ಡಿಯಾಗಿವೆ. ಹೀಗಾಗಿ ಆರ್ ಸಿಬಿಗೆ ಹೊಸ ನಾಯಕನನ್ನು ಕಂಡುಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ.
ಹರಾಜು ಪ್ರಕ್ರಿಯೆಯಲ್ಲಿ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಕೈಬಿಟ್ಟಲ್ಲಿ ಮಾತ್ರ ಆರ್ ಸಿಬಿಗೆ ಅವರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಅವಕಾಶವಿದೆ. ಆಗ ಬೇಕಾದರೆ ಅವರು ಬೆಂಗಳೂರು ತಂಡದ ನಾಯಕರಾದರೂ ಆಗಬಹುದು. ಆರ್ ಸಿಬಿ ಅಭಿಮಾನಿಗಳೂ ಇದನ್ನೇ ಬಯಸುತ್ತಿದ್ದಾರೆ. ರೋಹಿತ್ – ವಿರಾಟ್ ಕಾಂಬಿನೇಶನ್ ಬೆಂಗಳೂರಿಗೆ ಕಪ್ ತಂದು ಕೊಡುವಲ್ಲಿ ನೆರವಾಗಬಲ್ಲುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ. ಆದರೆ ಅಂತಹ ಸಾಧ್ಯತೆಗಳು ಕಡಿಮೆ ಎಂದೇ ಹೇಳಲಾಗುತ್ತಿದೆ.
ಇನ್ನು ಕೆಲ ಸಮಯದಿಂದ ಕೆಎಲ್ ರಾಹುಲ್ ಅವರು ಬೆಂಗಳೂರನ್ನು ಬೆಂಗಳೂರು ತಂಡಕ್ಕೆ ಕರೆತಂದು ನಾಯಕನನ್ನಾಗಿ ಮಾಡುವುದು ಎಂಬ ಮಾತೂ ಇದೆ. ಇದೂ ಸಾಧ್ಯವಾಗದಿದ್ದರೆ ತಂಡದಲ್ಲಿ ಇರುವ ಯುವ ಆಟಗಾರರಲ್ಲಿ ಒಬ್ಬರನ್ನು ನಾಯಕನಾಗಿ ಆಯ್ಕೆ ಮಾಡಬಹುದು. ಆದರೆ ಅದು ಸದ್ಯದ ಮಟ್ಟಿಗೆ ಕಷ್ಟ. ವಿರಾಟ್ ಕೊಹ್ಲಿ ಬಿಟ್ಟರೆ ಆರ್ ಸಿಬಿ ಮುಂದೆ ಮತ್ತೊಂದು ಆಯ್ಕೆ ಇರಲಾರದು.