ಚಿಕ್ಕೋಡಿ : ಮೊನ್ನೆ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಡು ಭಾಷೆಯಲ್ಲಿ ಮಾತನಾಡಿದ್ದೇನೆ ಹೊರತು ಯಾರಿಗೂ ಅವಮಾನ ಮಾಡುವ ಮತ್ತು ಯಾರ ಸಾವು ಬಯಸಿ ಮಾತನಾಡಿಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗುಂಡೇವಾಡಿ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೋಳಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ರಾಜು ಕಾಗೆ ವಿನಾಕಾರಣ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಮಾತನಾಡಿದ ಉದ್ದೇಶ ಬರೀ ಇಷ್ಟೇ, ದೇಶದ 140 ಕೋಟಿ ಜನರಲ್ಲಿ ಪ್ರಧಾನಿ ಆಗುವ ಯೋಗ್ಯತೆ ಇಲ್ಲವೇ ಎಂದು ಪ್ರಶ್ನಿಸಿದ್ದೆ. ಆದರೆ ನಾನು ಸಾವು ಬಯಸಿದ್ದಾಗಿ ಬಿಂಬಿಸುತ್ತಿರುವುದು ನೋವಿನ ಸಂಗತಿ ಎಂದು ಹೇಳಿದರು.
ಪ್ರಧಾನಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿಯವರು ದೂರುತ್ತಿದ್ದಾರೆ. ನಾನೂ ಕೂಡ ಒಬ್ಬ ಹಿಂದು. ನಾನೇನು ಹಿಂದೂ ವಿರೋಧಿ ಅಲ್ಲ ಎಂದರು. ನಾನೇಕೆ ಪ್ರಧಾನಿ ಮೋದಿ ಅವರ ಸಾವನ್ನು ಬಯಸಲಿ. ಅವರು ಇನ್ನೂ ನೂರ್ಕಾಲ ಬಾಳಲಿ. ನಾನು ಯಾರನ್ನಾದರೂ ಸಾಯಲಿ ಎಂದರೆ ಸಾಯುತ್ತಾರೆಯೇ ಎಂದು ಶಾಸಕ ರಾಜು ಕಾಗೆ ಪ್ರಶ್ನಿಸಿದರು.
ನನ್ನದು ಇಪ್ಪತ್ತೈದು ವರ್ಷಗಳ ರಾಜಕೀಯ ಜೀವನ. ನಾನು ಯಾರಿಗೂ ನೋವನ್ನುಂಟು ಮಾಡುವ ಯಾರಿಗೂ ಕಪ್ಪು ಚುಕ್ಕೆ ಹಚ್ಚುವ ಕೆಲಸ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಹೇಳಿದರು. ನಾನು ಸಿದ್ದರಾಮಯ್ಯ ಬಗ್ಗೆಯೂ ಮಾತನಾಡುತ್ತೇನೆ. ಸಹಜವಾಗಿಯೇ ಆಡುವ ಭಾಷೆಯಲ್ಲಿ ಮಾತನಾಡುವುದು ರೂಢಿ. ಅದನ್ನೇ ತಿರುಚಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವುದು ಖಂಡನೀಯ ಎಂದರು.
ಇನ್ನು ಜುಗೂಳ ಗ್ರಾಮದಲ್ಲಿಯೂ ಇದೇ ಆಗಿದೆ ನಾನು ಕಾರಿನಲ್ಲಿ ಹೋಗಬೇಕಾದರೆ ಕೆಲವರು ಮುಂದೆ ಬಂದರು. ನನ್ನನ್ನು ನೋಡಿ ಧಿಕ್ಕಾರದ ಘೋಷಣೆ ಕೂಗಿದರು. ನನ್ನ ಕಾರಿನ ಮೇಲೆ ಗುದ್ದಿದರು. ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದೆ ನಾನು ಪ್ರಚಾರ ಕಾರ್ಯಕ್ರಮದಲ್ಲಿ ಹಾಸ್ಯಭರಿತವಾಗಿ ಮಾತನಾಡುತ್ತಾ ವಿದ್ಯುತ್ ಸಂಪರ್ಕ ಕಡಿತದ ಬಗ್ಗೆ ಹೇಳಿದೆ. ಆದರೆ ಅದನ್ನೂ ಕೂಡ ತಿರುಚಿ ಜನತೆಗೆ ಬೆದರಿಕೆ ಹಾಕಿ ಮತ ಕೇಳಿದ್ದಾರೆ ಎಂದು ಆರೋಪಿಸಿದರು.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com