Top Newsಸುದ್ದಿ

ಯಾ ಯಾ ಅನ್ನೋಕೆ ಇದು ಕಾಫಿ ಶಾಪ್‌ ಅಲ್ಲ..ಕೋರ್ಟ್;‌ ಸಿಜೆಐ ಚಂದ್ರಚೂಡ್‌ ರೇಗಿದ್ದೇಕೆ?

ನವದೆಹಲಿ: ನ್ಯಾಯಪೀಠಕ್ಕೆ ವಿವರಣೆ ನೀಡುವಾಗ ‘ಹೌದು’ ಎನ್ನುವ ಬದಲು ಅನೌಪಚಾರಿಕವಾಗಿ ‘ಯಾ’ ಪದ ಬಳಸಿದ ವಕೀಲರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಜೆಐ ಡಿವೈ ಚಂದ್ರಚೂಡ್ ಅವರು ಸೋಮವಾರ ತರಾಟೆಗೆ ತೆಗೆದುಕೊಂಡಿದ್ದು, ಈ ರೀತಿಯ ಹಾವಭಾವಗಳೆಂದರೆ ತಮಗೆ ಅಲರ್ಜಿ ಎಂದ ಸಿಜೆಐ, ಇದು ಕೆಫೆ ಅಲ್ಲ ಕೋರ್ಟ್ ಕೊಠಡಿ ಎನ್ನುವುದನ್ನು ಗಮನದಲ್ಲಿಡಿ ಎಂದು ವಕೀಲರಿಗೆ ನೆನಪಿಸಿದರು.

ಏನಿದು ಘಟನೆ?

ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಪ್ರತಿವಾದಿಯನ್ನಾಗಿ ಸೇರಿಸಿದ್ದ 2018ರ ಅರ್ಜಿಯೊಂದನ್ನು ವಕೀಲರು ನ್ಯಾಯಪೀಠದ ಮುಂದೆ ಪ್ರಸ್ತಾಪಿಸಿದ್ದರು. “ಆದರೆ ಇದು 32ನೇ ವಿಧಿಯ ಅರ್ಜಿಯೇ? ನ್ಯಾಯಾಧೀಶರನ್ನು ಪ್ರತಿವಾದಿಯನ್ನಾಗಿಸಿ ನೀವು ಹೇಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೀರಿ?” ಎಂದು ಸಿಜೆಐ ಪ್ರಶ್ನಿಸಿದ್ದರು. ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ನಾಗರಿಕರು ಸಂವಿಧಾನಾತ್ಮಕ ಪರಿಹಾರ ಕೋರುವ ಹಕ್ಕಿನ ಕುರಿತು 32ನೇ ವಿಧಿಯು ಸಾಂವಿಧಾನಿಕ ಖಾತರಿಯನ್ನು ನೀಡಿದೆ.

ಮಾಜಿ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಆಂತರಿಕ ತನಿಖೆಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ, ಪ್ರತಿವಾದಿಯಾಗಿ ನ್ಯಾಯಾಧೀಶರೊಂದಿಗೆ ನೀವು PIL ಅನ್ನು ಹೇಗೆ ಸಲ್ಲಿಸಬಹುದು” ಎಂದು ಚಂದ್ರಚೂಡ್ ಕೇಳಿದಾಗ, ವಕೀಲರು ಯಾ ಯಾ, ಆಗಿನ CJI ರಂಜನ್ ಗೊಗೊಯ್ ಎಂದು ಹೇಳಲು ಪ್ರಾರಂಭಿಸಿದರು. ಅವರ ಮಾತನ್ನು ಅಲ್ಲೇ ತಡೆದ ಚಂದ್ರಚೂಡ್‌, “ಯಾ ಯಾ ಯಾ ಎಂದು ಹೇಳಬೇಡಿ. ಹೌದು ಎಂದು ಹೇಳಿ. ಇದು ಕಾಫಿ ಶಾಪ್ ಅಲ್ಲ. ಇದು ಕೋರ್ಟ್. ಜನರು ಯಾ ಎಂದು ಹೇಳುವುದು ನನಗೆ ಸ್ವಲ್ಪ ಅಲರ್ಜಿ ಎಂದು ತೀಕ್ಷ್ಣವಾಗಿ ಹೇಳಿದರು.

“ನ್ಯಾ ಗೊಗೊಯ್ ಅವರು ಈ ನ್ಯಾಯಾಲಯದ ಮಾಜಿ ನ್ಯಾಯಾಧೀಶರು. ನೀವು ನ್ಯಾಯಾಧೀಶರೊಬ್ಬರ ವಿರುದ್ಧ ಈ ರೀತಿಯ ಮನವಿಯನ್ನು ಸಲ್ಲಿಸಲು ಸಾಧ್ಯವಿಲ್ಲ ಮತ್ತು ನೀವು ಪೀಠದ ಮುಂದೆ ಯಶಸ್ವಿಯಾಗದ ಕಾರಣ ಆಂತರಿಕ ವಿಚಾರಣೆಯನ್ನು ಕೋರಲು ಸಾಧ್ಯವಿಲ್ಲ” ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

ನಾನು ತಪ್ಪು ಮಾಡಿಲ್ಲ ಎಂದ ವಕೀಲ

ಇದಕ್ಕೆ ಪ್ರತಿಕ್ರಿಯೆ ನೀಡಿದ ವಕೀಲ, “ಆದರೆ ನ್ಯಾ ರಂಜನ್ ಗೊಗೊಯ್ ಅವರು ನಾನು ಕಾನೂನುಬಾಹಿರವಾಗಿ ನಡೆದುಕೊಂಡಿರುವ ಆರೋಪದ ಕುರಿತಾದ ಹೇಳಿಕೆ ಆಧಾರದಲ್ಲಿ ನನ್ನ ಅರ್ಜಿಯನ್ನು ವಜಾಗೊಳಿಸಿದ್ದರು. ನಾನು ಯಾವ ತಪ್ಪೂ ಮಾಡಿರಲಿಲ್ಲ. ಕಾರ್ಮಿಕ ಕಾನೂನುಗಳ ಬಗ್ಗೆ ತಿಳಿವಳಿಕೆ ಇರುವ ಪೀಠದ ಮುಂದೆ ನನ್ನ ಪರಾಮರ್ಶನಾ ಅರ್ಜಿಯನ್ನು ವರ್ಗಾಯಿಸುವಂತೆ ಸಿಜೆಐ ಠಾಕೂರ್ ಅವರಿಗೆ ಮನವಿ ಮಾಡಿದ್ದೆನಷ್ಟೆ. ಆದರೆ ಅದು ಸಾಧ್ಯವಾಗಲಿಲ್ಲ. ಬದಲಾಗಿ ಅರ್ಜಿಯನ್ನು ವಜಾಗೊಳಿಸಲಾಯಿತು” ಎಂದು ಅಲವತ್ತುಕೊಂಡರು.

ಅರ್ಜಿ ಪರಿಶೀಲಿಸಲು ಸೂಚನೆ

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿರುವ ಸಂದರ್ಭದಲ್ಲಿ ನ್ಯಾಯಾಧೀಶರನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ವಕೀಲರಿಗೆ ಮರಾಠಿಯಲ್ಲಿ ಸಿಜೆಐ ತಿಳಿಸಿದರು. ಈ ಅರ್ಜಿಯನ್ನು ರಿಜಿಸ್ಟ್ರಿ ಪರಿಶೀಲಿಸಲಿದೆ ಎಂದ ಸಿಜೆಐ ಡಿವೈ ಚಂದ್ರಚೂಡ್, ಮಾಜಿ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಹೆಸರನ್ನು ಅರ್ಜಿಯಿಂದ ಅಳಿಸಿ ಹಾಕುವಂತೆ ವಕೀಲರಿಗೆ ಸೂಚಿಸಿದರು. ರಂಜನ್ ಗೊಗೊಯ್ ಅವರು ಪ್ರಸ್ತುತ ರಾಜ್ಯಸಭಾ ಸಂಸದರಾಗಿದ್ದಾರೆ.

Comments (0)

Your email address will not be published. Required fields are marked *

Back to top button