ಕಲಬುರ್ಗಿ : ಗುತ್ತೇದಾರ್ ಫ್ಯಾಮಿಲಿ.. ಅದೊಂದು ದೊಡ್ಡ ಮನೆತನ.. ಕಲಬುರ್ಗಿಯಲ್ಲಿ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡಿದ ಕುಟುಂಬವದು. ಸದಾ ವೈಟ್ ಅಂಡ್ ವೈಟ್ ನಲ್ಲೇ ಮಿಂಚುತ್ತಿದ್ದ ಈ ಕುಟುಂಬ ಇವತ್ತು ಹೇಗಿದೆ..? ರಾಜಕೀಯವಾಗಿಯೂ ಅವರು ಸೈಲೆಂಟಾಗಿರೋದು ಯಾಕೆ ಅನ್ನೋದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ
ಗುತ್ತೇದಾರ್ ಕುಟುಂಬ ಕಲಬುರ್ಗಿ ಜಿಲ್ಲೆಯಲ್ಲಿ ರಾಜಕೀಯವಾಗಿ ತುಂಬಾ ಬಲಾಡ್ಯ ಕುಟುಂಬವಾಗಿತ್ತು,ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರ ತಂದೆ ವೆಂಕಯ್ಯ ಗುತ್ತೇದಾರ್ ರಾಜಕೀಯವಾಗಿ ತುಂಬಾ ಪ್ರಭಲರಾಗಿದ್ದರು. ಈ ಹಿಂದೆ ಗುತ್ತೇದಾರ್ ಕುಟುಂಬಕ್ಕೆ ಇರತಕ್ಕಂತಹ ರಾಜಕೀಯ ಪ್ರಭಾವ ಇತ್ತೀಚಿಗೆ ಕಡಿಮೆಯಾಗಿದ್ದಾದ್ರೂ ಯಾಕೆ ಅನ್ನೋದೇ ಇಂಟ್ರೆಸ್ಟಿಂಗ್.

ಕಲಬುರ್ಗಿ ಜಿಲ್ಲೆಯ ಅಫಜಲಪುರ ಅಂದ ತಕ್ಷಣ ನಮಗೆ ನೆನಪಾಗೋದು ಭೀಮಾ ತೀರದ ಕುಖ್ಯಾತ ರಕ್ತ ಸಿಕ್ತ ಇತಿಹಾಸ… ಇಂತಹ ಅಫಜಲಪುರ ಕ್ಷೇತ್ರದಲ್ಲಿ ಶಾಸಕರಾಗಿ ಸಚಿವರಾಗಿ ಕಾರ್ಯನಿರ್ವಹಿಸಿದ ಮಾಲಿಕಯ್ಯ ಗುತ್ತೇದಾರ್ ಹಿರಿಯ ಹಾಗೂ ತುಂಬಾ ಪ್ರಭಾವಶಾಲಿ ರಾಜಕಾರಣಿ. ಜನತಾದಳ, ಬಂಗಾರಪ್ಪನವರ ಕೆಸಿಪಿ, ಹಾಗೂ ಕಾಂಗ್ರೆಸ್ ಪಕ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದರು. ಮಾಲಿಕಯ್ಯಾ ಗುತ್ತೇದಾರ್ ಕಳೆದ 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಮೂಲಕ ಅಫಜಲಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್ ವಿರುದ್ಧ ಸೋಲನ್ನು ಅನುಭವಿಸಿದ್ದ ಇವರು, ಸೋಲಿನ ಸೇಡಿಗಾಗಿ ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಉಮೇಶ್ ಜಾದವ್ ಗೆಲುವಿಗೆ ಕಾರಣವಾಗಿದ್ದರು.
ಇನ್ನೂ,ಕಳೆದ 2023 ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಗುತ್ತೇದಾರ್ ಕುಟುಂಬದಲ್ಲಿ ಒಡಕು ಪ್ರಾರಂಭವಾಯಿತು. ಮಾಲೀಕಯ್ಯ ಗುತ್ತೇದಾರ್ ಹಾಗೂ ಅವರ ಸಹೋದರ ನಿತಿನ್ ಗುತ್ತೇದಾರ್ ಬಿಜೆಪಿ ಟಿಕೆಟ್ ಗಾಗಿ ಪ್ರಬಲ ಪೈಪೋಟಿಯನ್ನು ನಡೆಸಿದ್ದರು. ಆದರೆ ಕೊನೆಗೆ ಬಿಜೆಪಿ ಮಾಲಿಕಯ್ಯ ಗುತ್ತೇದಾರ್ ಅವರಿಗೆ ಅಫಜಲಪುರ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಿತು. ಬಿಜೆಪಿ ಹೈಕಮಾಂಡ್ ತೀರ್ಮಾನದಿಂದ ಸಿಡಿದೆದ್ದ ನಿತಿನ್ ಗುತ್ತೇದಾರ್ ಪಕ್ಷೇತರವಾಗಿ ಅಫಜಲಪುರ ಕ್ಷೇತ್ರದಿಂದ ಸಹೋದರ ಮಾಲಿಕಯ್ಯ ಗುತ್ತೇದರ್ ವಿರುದ್ಧವೇ ಕಣಕ್ಕಿಳಿದರು.
ಇಬ್ಬರು ಸಹೋದರರ ನಡುವಿನ ಸ್ಪರ್ಧೆಯಿಂದ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ. ಪಾಟೀಲ್ ಸಲೀಸಾಗಿ ಗೆಲುವು ಸಾಧಿಸಿದ್ದರು. ದುರಂತ ಅಂದ್ರೆ ಈ ಚುನಾವಣೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕರಾದ ಮಾಲಿಕಯ್ಯ ಗುತ್ತೇದಾರ್ ಮೂರನೇ ಸ್ಥಾನಕ್ಕೆ ಕುಸಿದರು. ಗುತ್ತೇದಾರ್ ಕುಟುಂಬದ ಇಬ್ಬರು ಸಹೋದರರ ರಾಜಕೀಯ ವೈರತ್ವದಿಂದ ಗುತ್ತೇದಾರ್ ಕುಟುಂಬ ಕಲಬುರ್ಗಿ ಜಿಲ್ಲೆಯ ರಾಜಕಾರಣದಲ್ಲಿ ಈಗ ತನ್ನ ಪ್ರಭಾವವನ್ನ ಕಳೆದುಕೊಳ್ಳುತ್ತಿದೆಯಾ ಎಂಬ ಪ್ರಶ್ನೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದೆ.

ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಅವರು ಬಿಜೆಪಿಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು .ಆದರೆ ಇತ್ತೀಚಿಗೆ ರಾಜ್ಯ ಬಿಜೆಪಿಯಲ್ಲಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾದಾಗ ಅವರ ಹೆಸರು ಕಾಣೆಯಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಲಿಕಯ್ಯ ಗುತ್ತೇದಾರ್ ಅವರನ್ನು ಈಗ ಬಿಜೆಪಿ ಮೂಲೆಗುಂಪು ಮಾಡ್ತಿದಿಯಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ
ಒಟ್ನಲ್ಲಿ, ಜನತಾದಳ, ಕೆಸಿಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ರಾಜಕಾರಣ ಮಾಡಿಕೊಂಡು ಬಂದು ಅಫಜಲಪುರ ಕ್ಷೇತ್ರದಿಂದ ಆರು ಬಾರಿ ಗೆಲುವು ಸಾಧಿಸಿದ ಮಾಲೀಕಯ್ಯ ಗುತ್ತೇದಾರ್ ಅವರು ಬಿಜೆಪಿ ಸೇರುವ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ಅವರೇ ಕೊಡಲಿ ಪೆಟ್ಟು ಹಾಕೊಂಡ್ರಾ ಎಂಬ ಮಾತು ಕಲಬುರ್ಗಿ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.