#Exclusive NewsTop Newsರಾಜಕೀಯರಾಜ್ಯಸುದ್ದಿ

ಮುನಿರತ್ನ ಕೊಟ್ಟ ದೂರಿನಲ್ಲಿ ಏನಿದೆ…?

ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಅವರು ನೀಡಿದ ದೂರಿನ ಅನ್ವಯ ನಂದಿನಿ ಲೇಔಟ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಒಳಸಂಚು ರೂಪಿಸಿ, ಹಲ್ಲೆ ಮತ್ತು ಕೊಲೆ ಮಾಡುವ ಉದ್ದೇಶದ ಭಾಗವಾಗಿ ಮೊಟ್ಟೆ ಎಸೆಯಲಾಗಿದೆ ಎಂದು ಮುನಿರತ್ನ ದೂರಿನಲ್ಲಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಮುನಿರತ್ನ ನೀಡಿದ ದೂರಿನಲ್ಲಿ ಸ್ಫೋಟಕ ಸಂಗತಿಗಳು ದಾಖಲಾಗಿವೆ. ಮುನಿರತ್ನ ನೀಡಿರುವ ದೂರಿನಲ್ಲಿ ಮಾಜಿ ಸಂಸದ ಡಿಕೆ ಸುರೇಶ್, ಕುಸುಮಾ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಸೇರಿದಂತೆ ನೂರರಿಂದ 150 ಜನರ ಹೆಸರಿದೆ.

ಡಿಸೆಂಬರ್ 5, 2024 ರಂದು ವಕೀಲರ ರೂಪದಲ್ಲಿ ಬಂದ ಇಬ್ಬರು, ‘ನಿನಗೆ ಈಗಲೂ ಕಾಲ ಮಿಂಚಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡು. ಇಲ್ಲದೆ ಇದ್ದರೆ ನಿನ್ನ ಮೇಲೆ ಪೋಕ್ಸೋ ಕೇಸ್ ಹಾಕಿ ಮತ್ತೆ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ನಮ್ಮ ಅಣ್ಣ, ಡಿಕೆಸುರೇಶ್ ಸಂತೋಷವಾಗಿರಬೇಕು. ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್​ ಅವರನ್ನ ಸೋಲಿಸಿದ್ದಕ್ಕಾಗಿ ಅವರು ನೊಂದಿದ್ದಾರೆ. ಅವರು ಸಂತೋಷವಾಗಿರಬೇಕಾದರೆ ಕುಸುಮಾ ಅವರು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಶಾಸಕರಾಗಬೇಕು. ಮುಂದಿನ ದಿನಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಳರ್ ಅವರ ಹಾಗೆ ಸಚಿವರಾಗಿ ನೋಡಬೇಕು. ಹೀಗಾಗಿ ನೀನು ರಾಜೀನಾಮೆ ಕೊಟ್ಟರೆ ಜೀವ ಉಳಿಯುತ್ತದೆ ಇಲ್ಲದಿದ್ದರೆ 100-150 ಜನ ಸೇರಿಸಿ ಒಟ್ಟಿಗೆ ಬಂದು ನೀನು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಆ್ಯಸಿಡ್ ಕೋಳಿ ಮೊಟ್ಟೆ ಹಾಕಿ, ನಿನ್ನ ಬಟ್ಟೆ ಹರಿದು, ಮುಖಕ್ಕೆ ಮಸಿ ಬಳಿದು ಚಪ್ಪಲಿ ಹಾರ ಹಾಕುತ್ತೇವೆ’ ಹೀಗೆಂದು ಬೆದರಿಕೆ ಹಾಕಿದ್ದಾರೆ ಎಂದು ಮುನಿರತ್ನ 7 ಪುಟಗಳ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್ ವಾಕ್ಸಮರ

ವಿಪಕ್ಷ ನಾಯಕ ಅಶೋಕ್, ಮೊಟ್ಟೆ ದಾಳಿ ನಡೆಸಿದ್ದ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಶಾಸಕರ ಮೇಲೆ ದಾಳಿ ಆಗುತ್ತಿದೆ ಎಂದಿದ್ದಾರೆ. ಇನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮೊಟ್ಟೆ ಕಥೆ ಬಗ್ಗೆ ನನಗೆ ಗೊತ್ತಿಲ್ಲ ಆ ಮೇಲೆ ಮಾತಾಡುತ್ತೇನೆ ಎಂದಿದ್ದಾರೆ. ವಿಪಕ್ಷ ನಾಯಕರ ಆರೋಪಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಮುನಿರತ್ನ ಕುರಿತು ನಾನು ಮಾತಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರೆ, ಬಿಜೆಪಿಯವರು ಡ್ರಾಮಾ ಕಂಪನಿ ರೀತಿ ವರ್ತಿಸುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ.

ತಮ್ಮ ಪುತ್ರಿ ಕುಸುಮಾ ಹೆಸರು ಎಳೆದು ತರುತ್ತಿರುವುದಕ್ಕೆ ಅವರ ತಂದೆ ಹನುಮಂತರಾಯಪ್ಪ ಆಕ್ರೋಶಗೊಂಡಿದ್ದಾರೆ. ಮುನಿರತ್ನ ನೀಚ, ನಿನ್ನೆಯ ಘಟನೆ ಅವರದೇ ಪ್ರಾಯೋಜಿತ ಎಂದಿದ್ದಾರೆ.ಒಟ್ಟಾರೆಯಾಗಿ ಮುನಿರತ್ನ ಮೇಲಿನ ಮೊಟ್ಟೆ ಎಸೆತ ಪ್ರಕರಣ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ತನಿಖೆಯಲ್ಲಿ ಯಾರ ಆರೋಪ ಸತ್ಯ, ಯಾರದ್ದು ಸುಳ್ಳು ಎಂಬುದು ಗೊತ್ತಾಗಲಿದೆ.

ಮುನಿತ್ನ ವಿರುದ್ಧ ಪ್ರತಿದೂರು

ಮತ್ತೊಂದೆಡೆ, ಮೊಟ್ಟೆ ಎಸೆದವರು ಎನ್ನಲಾದ ಆರೋಪಗಳಿಂದಲೂ ಪ್ರತಿದೂರು ದಾಖಲಾಗಿದೆ. ತಮ್ಮ ಮೇಲೆ ಗುಂಪು ಕಟ್ಟಿ ಹಲ್ಲೆ ಮಾಡಿದ್ದಾರೆಂದು ವಿಶ್ವನಾಥ, ಕೃಷ್ಣಮೂರ್ತಿ ಮತ್ತು ಚಂದ್ರು ಪ್ರತಿದೂರು ದಾಖಲಿಸಿದ್ದಾರೆ.

 

Comments (0)

Your email address will not be published. Required fields are marked *

Back to top button