ಬೆಂಗಳೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಬೆಳಗಾವಿ ಪೊಲೀಸರ ವಶದಲ್ಲಿರುವ ಬಿಜೆಪಿ ಎಂಎಲ್​​ಸಿ ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ತಮಗೆ ಜೀವಕ್ಕೆ ಅಪಾಯವಿದ್ದು ಏನೇ ಆದರೂ ಅದಕ್ಕೆ ಪೊಲೀಸರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಹೆಬ್ಬಾಳ್ಕರ್ ಕಾರಣ ಎಂದು ವಿಡಿಯೋ ಸಂದೇಶ ಪ್ರಕಟಿಸಿದ್ದಾರೆ. ಇಷ್ಟೇ ಅಲ್ಲದೆ, ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಸಂದೇಶ ಪ್ರಕಟಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿ ಸಿಟಿ ರವಿ

ಮತ್ತೊಂದೆಡೆ, ಬೆಳಗ್ಗೆ 5 ಗಂಟೆ ಸುಮಾರಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ನನ್ನನ್ನು ಖಾನಾಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಯಾವ ಮೊಕದ್ದಮೆ ದಾಖಲಾಗಿದೆ ಎಂಬ ಮಾಹಿತಿಯನ್ನೂ ನೀಡಿಲ್ಲ. ನಾನು ಕೊಟ್ಟ ದೂರನ್ನು ಗಂಟೆಗಟ್ಟಲೆ ಕಾದರೂ ತೆಗೆದುಕೊಂಡಿಲ್ಲ. ಜೀರೋ ಎಫ್​ಐಆರ್ ಕೂಡ ಮಾಡಿಲ್ಲ. ಇಲ್ಲಿಂದ ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆಂದು ಗೊತ್ತಿಲ್ಲ. ಎಫ್‌ಐಆರ್‌ನಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ 3 ಗಂಟೆ ಕಳೆದಿದೆ. ಪೊಲೀಸ್ ಠಾಣೆಗೆ ಮತ್ತು ನನ್ನನ್ನು ಪೊಲೀಸ್ ಠಾಣೆಗೆ ಏಕೆ ಕರೆತರಲಾಗಿದೆ ಎಂದು ಹೇಳಿಲ್ಲ, ಡಿಸಿಎಂ ಡಿಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ತಂಡ ನನ್ನನ್ನು ಅಪರಾಧಿಯಂತೆ ನಡೆಸಿಕೊಳ್ಳುತ್ತಿದೆ. ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ, ಜನಪ್ರತಿನಿಧಿಯಾಗಿದ್ದೇನೆ. ಅಪರಾಧಿಯನ್ನು ನಡೆಸಿಕೊಳ್ಳುವಂತೆ ನನ್ನನ್ನು ನಡೆಸಿಕೊಳ್ಳಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ನಡೆದುಕೊಂಡ ರೀತಿಯಲ್ಲಿಯೇ ನಡೆದುಕೊಳ್ಳುತ್ತಿದ್ದಾರೆ ಎಂದು ವಿಡಿಯೋ ಸಂದೇಶದಲ್ಲಿ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

Leave a Reply

Your email address will not be published. Required fields are marked *

Verified by MonsterInsights