ಕಳೆದ ವರ್ಷ ಸರಿಯಾಗಿ ಮಳೆ ಬೀಳದ ಕಾರಣ ಬೇಸಿಗೆ ಆರಂಭಕ್ಕೂ ಮುನ್ನವೇ ಕಬಿನಿ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದೆ. ಮೈಸೂರು ಜಿಲ್ಲೆ ಹೆಚ್,ಡಿ,ಕೋಟೆ ತಾಲೂಕಿನ ಕಬಿನಿ ಜಲಾಶಯದಲ್ಲಿ ದಿನೇ ದಿನೆ ನೀರಿನ ಮಟ್ಟ ಕುಸಿಯುತ್ತಿದೆ. ಸದ್ಯ 70 ಅಡಿಗೆ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಇದು 84 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯ. ಈಗ ಕಬಿನಿ ಜಲಾಶಯದಲ್ಲಿ 12 ಟಿಎಂಸಿ ನೀರು ಸಂಗ್ರಹಣೆಯಾಗಿದೆ.
ಕೇರಳದಲ್ಲಿ ಮಳೆ ಅಥವಾ ಪ್ರವಾಹ ಉಂಟಾದರೆ ಕಬಿನಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುತ್ತಿತ್ತು. 19.52TMC ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿರುವ, ಈ ಜಲಾಶಯ ವರ್ಷಕ್ಕೆ ಎರಡು ಬಾರಿ ತುಂಬುವ ರಾಜ್ಯದ ಏಕೈಕ ಜಲಾಶಯ ಕಬಿನಿಯಾಗಿದೆ.
ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ ಕುಡಿಯಲು ಕೇವಲ 8.5 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಉಳಿದ 3.5TMC ನೀರು ಡೆಡ್ ಸ್ಟೊರೇಜ್. ಕಬಿನಿ ಜಲಾಶಯದಿಂದ ಬೆಂಗಳೂರು, ಮೈಸೂರಿಗೆ ನೀರು ಪೂರೈಕೆಯಾಗುತ್ತೆ.
ಕಬಿನಿ ಜಲಾಶಯದಿಂದ ಪ್ರತಿದಿನ 500 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತೆ. ಬೆಂಗಳೂರಿಗೆ 300 ಕ್ಯೂಸೆಕ್, ಮೈಸೂರು, ಚಾಮರಾಜನಗರಕ್ಕೆ 200 ಕ್ಯೂಸೆಕ್ ನೀರು ಬಿಡುಗಡೆ ಆಗುತ್ತೆ. ಸದ್ಯ ಜೂನ್ ತಿಂಗಳವರೆಗೆ ಕುಡಿಯುವ ನೀರಿಗೆ ತೊಂದರೆ ಇಲ್ಲ. ಆದರೆ ಜೂನ್ ನಂತರ ನೀರಿನ ಸಮಸ್ಯೆ ಉಂಟಾಗಲಿದೆ.
ಈ ಜಲಾಶಯಕ್ಕೆ ಪ್ರಮುಖವಾಗಿ ಬರುವ ಒಳಹರಿವು ಎಂದರೆ ಕೇರಳದ ವಯನಾಡು ಆಗಿದೆ. ವಯನಾಡಿನಲ್ಲಿ ಹೆಚ್ಚಾಗಿ ಮಳೆ ಬಿದ್ದರೆ ಮಾತ್ರ ಈ ಜಲಾಶಯಕ್ಕೆ ಒಳಹರಿವು ಹೆಚ್ಚಾಗಲಿದೆ. ಆದರೆ ಈ ಬಾರಿ ಕೇರಳದಲ್ಲೂ ಮಳೆ ಇಲ್ಲದ ಕಾರಣ ಈ ಬಾರಿ ಮೈಸೂರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ.