ಗದಗನಲ್ಲಿ ಆಶ್ರಯ ನಿವೇಶನಗಳ ಹಂಚಿಕೆ ವಾರ್

ಗದಗ: ಆಶ್ರಯ ನಿವೇಶನದ ಫನಾನುಭವಿಗಳ ಹಳೆಯ ಪಟ್ಟಿ ರದ್ದು ಮಾಡಿ, ಹೊಸ ಪಟ್ಟಿ ಸಿದ್ಧಪಡಿಸಿರುವುದಕ್ಕೆ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ ಮತ್ತು ರಾಮಣ್ಣ ಲಮಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ರಾಮಣ್ಣ ಲಮಾಣಿ ಹೊಸ ಫಲಾನುಭವಿಗಳ ಪಟ್ಟಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಶಿಗ್ಲಿ ರಸ್ತೆಯಲ್ಲಿ 32 ಎಕರೆ 27 ಗುಂಟೆ ಜಾಗವನ್ನೂ ಖರೀದಿಸಲಾಗಿತ್ತು. ಆದರೆ ಫಲಾನುಭವಿಗಳಿಗೆ ನಿವೇಶನ ಹಂಚಲು ಸಾಧ್ಯವಾಗಿರಲಿಲ್ಲ. ನಂತರ ನಾನು ಶಾಸಕನಾದ ಮೇಲೆ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಆಶ್ರಯ ಸಮಿತಿ ಮೂಲಕ ನೇರವಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿ ಕೊಡಲಾಗಿತ್ತು. ಅಷ್ಟರಲ್ಲಿ ನನ್ನ ಅವಧಿ ಕೊನೆಗೊಂಡಿದ್ದರಿಂದ, ನಿವೇಶನದ ಹಕ್ಕುಪತ್ರ ಹಂಚಲು ಸಾದ್ಯವಾಗಲಿಲ್ಲ. ಆದರೆ ಈಗಿನ ಶಾಸಕ ಡಾ. ಚಂದ್ರು ಲಮಾಣಿ ಅವರು ಹಳೆಯ ಫಲಾನುಭವಿಗಳು ಪಟ್ಟಿಯನ್ನು ರದ್ದು ಪಡಿಸಿ, ಹೊಸದಾಗಿ ಫಲಾನುಭವಿಗಳ ಆಯ್ಕೆ ಮಾಡಿದ್ದು, ಪಟ್ಟಿ ಪ್ರಕಟಿಸುವ ತರಾತುರಿಯಲ್ಲಿದ್ದಾರೆಂದು ತಿಳಿದು ಬಂದಿದೆ. ಯಾವ ಕಾರಣಕ್ಕೂ ಹಳೆ ಫಲಾನುಭವಿಗಳ ಪಟ್ಟಿಯನ್ನು ಬದಲಾಯಿಸಬಾರದು. ಬದಲಾವಣೆ ಮಾಡಲು ಬಿಡಲ್ಲ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ವಾಗ್ದಾಳಿ ನಡೆಸಿದ್ರು.
ಇದೇ ವಿಚಾರವಾಗಿ ಶಾಸಕ ಚಂದ್ರು ಲಮಾಣಿ ಕೂಡ ಪ್ರತಿಕ್ರಿಯಿಸಿದ್ದಾರೆ. ಹಳೆಯ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವಾಗ, ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಪಟ್ಟಿಯ ಅಧಿಕೃತ ಪಟ್ಟಾಬುಕ್ ಬಂದಿಲ್ಲ. ಅದರಲ್ಲಿ ಅನರ್ಹ ಫಲಾನುಭವಿಗಳಿದ್ದು, ನಿವೇಶನ ಹಂಚಿಕೆಯನ್ನು ತಡೆಹಿಡಿಯುವಂತೆ, ಪುರಸಭೆ ಕೆಲ ಸದಸ್ಯರು, ನಿಗಮಕ್ಕೆ ದೂರ ಸಲ್ಲಿಸಿದ್ದರು. ಅಲ್ಲದೆ ಕೆಲ ಸಂಘಟನೆಗಳು ಸಹ ಈ ಹಿಂದಿನ ಅರ್ಹ ಫಲಾನುಭವಿಗಳಿಗೆ ಬದಲಾಗಿ ಅನರ್ಹರ ಹೆಸರನ್ನು ಸೇರ್ಪಡೆ ಮಾಡಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇಷ್ಟೇ ಅಲ್ಲದೆ, ಮಾಜಿ ಶಾಸಕ ರಾಮಣ್ಣ ಲಮಾಣಿ ಕುಟುಂಬದವರು, ನಿವೇಶನದ ಯಾದಿಗಳನ್ನು ತಯಾರಿಸುವಾಗ ಹಸ್ತಕ್ಷೇಪ ನಡೆಸಿದ್ದು ದುಡ್ಡು ತೆಗೆದುಕೊಂಡ ಬಗ್ಗೆ ಅನೇಕರು ತಿಳಿಸಿದ್ದಾರೆ. ಹೀಗಾಗಿ ಹೊಸ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿರುವುದಾಗಿ ಸ್ಪಷ್ಟನೆ ನೀಡಿದ್ರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವಧಿಯಲ್ಲೂ, ನಿವೇಶನ ಹಂಚಿಕೆಯಾಗಿರಲಿಲ್ಲ. ಸುಮಾರು 10 ವರ್ಷಗಳಿಂದ ಆಶ್ರಯ ನಿವೇಶನ ಹಂಚಿಕೆಯಾಗದೇ, ಫಲಾನುಭವಿಗಳು ಜಾತಕ ಪಕ್ಷಿಯಂತೆ ಕಾದು ಕೂರುವಂತಾಗಿದೆ. ಒಟ್ನಲ್ಲಿ ಮಾಜಿ, ಹಾಲಿ ಶಾಸಕರ ಕಿತ್ತಾಟದಿಂದ ಅರ್ಹ ಫಲಾನುಭವಿಗಳಿಗೆ ನಿವೇಶನ ಸಿಗಲು ಇನ್ನು ಎಷ್ಟು ದಿನ ಕಾಯಬೇಕೋ ಗೊತ್ತಿಲ್ಲ.




