ವಿರಾಟ್ ಕೊಹ್ಲಿ ಮುಂದಿನ ಎರಡು ಐಸಿಸಿ ಟೂರ್ನಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಎರಡು ಟೂರ್ನಿಗಳು ನಡೆಯುವುದು 2027 ರಲ್ಲಿ. ಅಂದರೆ ಈ ಎರಡು ಪ್ರಮುಖ ಟೂರ್ನಿಗಳ ಬಳಿಕ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಸಾಧ್ಯತೆಯಿದೆ. ಅಲ್ಲದೆ 2028 ರಲ್ಲಿ ಒಂದು ಪಂದ್ಯಕ್ಕಾಗಿ ಮತ್ತೆ ಕಂಬ್ಯಾಕ್ ಮಾಡುವ ಸಣ್ಣ ಸುಳಿವು ಸಹ ನೀಡಿದ್ದಾರೆ.
ಏಕದಿನ ವಿಶ್ವಕಪ್ ಗೆದ್ದಾಯ್ತು, ಟಿ20 ವಿಶ್ವಕಪ್ ಸಹ ಗೆದ್ದಾಯ್ತು. ಚಾಂಪಿಯನ್ಸ್ ಟ್ರೋಫಿಯಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸಿಯಾಯ್ತು… ಇನ್ನು ವಿರಾಟ್ ಕೊಹ್ಲಿ ಮುಂದಿರುವುದು ಕೇವಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿ ಮಾತ್ರ. ಅದು ನಡೆಯುವುದು 2027 ರಲ್ಲಿ. ಅದೇ ವರ್ಷ ಏಕದಿನ ವಿಶ್ವಕಪ್ ಕೂಡ ಜರುಗಲಿದೆ. ಈ ಎರಡು ಟೂರ್ನಿಗಳೇ ಕಿಂಗ್ ಕೊಹ್ಲಿಯ ಮುಂದಿನ ಟಾರ್ಗೆಟ್. ಈ ಎರಡು ಐಸಿಸಿ ಟೂರ್ನಿಗಳ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವುದು ಬಹುತೇಕ ಖಚಿತ.
ಈ ಬಗ್ಗೆ ಆರ್‌ಸಿಬಿ ಇನ್ನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಾನು ಮತ್ತೊಂದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಾಣಿಸಿಕೊಳ್ಳದೇ ಇರಬಹುದು. ಈ ಹಿಂದಿನ ಫಲಿತಾಂಶ ಏನೇ ಆಗಿದ್ದರೂ ಅದರಲ್ಲಿ ನನಗೆ ತೃಪ್ತಿ ಇದೆ. ಹೀಗಾಗಿ ನಾನು ಮತ್ತೆ ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಸರಣಿ ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ ಎಂದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯುವುದು 2029 ರಲ್ಲಿ. ಹೀಗಾಗಿ ಅಲ್ಲಿಯವರೆಗೆ ಅವರು ಭಾರತ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಅಲ್ಲದೆ ಅದಕ್ಕೂ ಮುನ್ನ 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನೊಂದಿಗೆ ಕಿಂಗ್ ಕೊಹ್ಲಿ ಟೆಸ್ಟ್ ಕೆರಿಯರ್ಗೆ ವಿದಾಯ ಹೇಳುವ ಸಾಧ್ಯತೆಯಿದೆ.
ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿಯ ಮುಂದಿನ ಗುರಿ ಏಕದಿನ ವಿಶ್ವಕಪ್. 2027 ರಲ್ಲಿ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯ ಮೂಲಕ ಏಕದಿನ ಕ್ರಿಕೆಟ್ ಕೆರಿಯರ್ ಅನ್ನು ಸಹ ಅವರು ಕೊನೆಗೊಳಿಸುವ ಸಾಧ್ಯತೆ ಹೆಚ್ಚಿದೆ.
ಪ್ರಸ್ತುತ ಮಾಹಿತಿ ಪ್ರಕಾರ, ವಿರಾಟ್ ಕೊಹ್ಲಿ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದು, ಹೀಗಾಗಿ ಮುಂದಿನ ಯೋಜನೆಗಳಿಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಈಗಲೇ ಬಹಿರಂಗಪಡಿಸಿದ್ದಾರೆ.
ಅಷ್ಟೇ ಅಲ್ಲದೆ 2028ರ ಒಲಿಂಪಿಕ್ಸ್ನಲ್ಲಿ ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸಿದರೆ, ಅಂತಿಮ ಪಂದ್ಯಕ್ಕಾಗಿ ನಿವೃತ್ತಿಯನ್ನು ಹಿಂಪಡೆಯುವುದಾಗಿ ಕೊಹ್ಲಿ ತಿಳಿಸಿದ್ದಾರೆ. ಅಂದರೆ ಭಾರತ ತಂಡವು ಒಲಿಂಪಿಕ್ಸ್ ಟಿ20 ಟೂರ್ನಿಯಲ್ಲಿ ಫೈನಲ್ಗೆ ತಲುಪಿದರೆ ವಿರಾಟ್ ಕೊಹ್ಲಿ ಕೊನೆಯ ಪಂದ್ಯದಲ್ಲಿ ಮಾತ್ರ ಕಣಕ್ಕಿಳಿಯಬಹುದು. ಈ ಮೂಲಕ ಭಾರತದಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್ ವೇಳೆ ಕಾಣಿಸಿಕೊಳ್ಳುವುದಿಲ್ಲ ಎಂಬುದನ್ನು ಸಹ ಖಚಿತಪಡಿಸಿದ್ದಾರೆ.
ಒಟ್ಟಿನಲ್ಲಿ 2027ರ ಅಂತ್ಯದ ವೇಳೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗುಳಿಯುವುದು ಬಹುತೇಕ ಖಚಿತ. ಇದಾಗ್ಯೂ ಅವರು ಫ್ರಾಂಚೈಸಿ ಲೀಗ್ನಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದರೆ ಲೀಗ್ ಕ್ರಿಕೆಟ್ನಿಂದಲೂ ಅವರು ಬೇಗನೆ ನಿವೃತ್ತಿ ಘೋಷಿಸಬಹುದು.