ಧಾರವಾಡ : ಐಶ್ವರ್ಯಗೌಡ ಮೂಲಕ ನನ್ನನ್ನು ಟ್ರ್ಯಾಪ್ ಮಾಡಲು ಮುಂದಾಗಿದ್ದರು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಎಂದು ಯೋಗೇಶಗೌಡ ಕೊಲೆ ಕೇಸ್‌ನ ಮಾಫಿ ಸಾಕ್ಷಿದಾರ ಬಸವರಾಜ್ ಮುತ್ತಗಿ ಹೊಸ ಬಾಂಬ್ ಸಿಡಿಸಿದ್ದಾರೆ..
ಐಶ್ವರ್ಯಗೌಡ ಮೂಲಕ ಬಸವರಾಜ ಮುತ್ತಗಿಯನ್ನು ಟ್ರ್ಯಾಪ್ ಮಾಡಿದ್ದರು ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಈ ವಿಷಯದಲ್ಲಿ ನಾನು ಟ್ರ್ಯಾಪ್ ಆಗಿಲ್ಲ. ನನ್ನನ್ನು ಟ್ರ್ಯಾಪ್ ಮಾಡಲು ಪ್ರಯತ್ನಿಸಿದ್ದರು.ವಿನಯ್ ಕುಲಕರ್ಣಿ, ಐಶ್ವರ್ಯ ಗೌಡ ಹಾಗೂ ಅಶ್ವಥ್ ಸೇರಿ ನನ್ನನ್ನು ಟ್ರ್ಯಾಪ್ ಮಾಡಲು ಯತ್ನಿಸಿದ್ದರು.
ಆದರೆ, ನಾನು ಅವರ ತಂತ್ರಕ್ಕೆ ಒಳಗಾಗಿಲ್ಲ. ನಾನು ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಮುಂದಾಗಿದ್ದೆ. ಇದನ್ನು ತಿಳಿದುಕೊಂಡೇ ನನ್ನನ್ನು ಟ್ರ್ಯಾಪ್ ಮಾಡಲು ಯತ್ನಿಸಿದ್ದರು. 2023ರಲ್ಲಿ ಚುನಾವಣೆ ಮುಂಚೆಯೇ ನಾನು ಯೋಗೀಶಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದೆ. ಕಾರಣಾಂತರಗಳಿಂದ ಕೋರ್ಟ್‌ನಲ್ಲಿ ಆ ಅರ್ಜಿ ತಿರಸ್ಕಾರ ಆಗಿತ್ತು. ಆ ಬಳಿಕವೂ ನಾನು ನನ್ನ ಪ್ರಯತ್ನ ಬಿಡಲಿಲ್ಲ. ಮತ್ತೊಂದು ಅರ್ಜಿ ಕೂಡ ಹಾಕಿದೆ. ಆಗ ಐಶ್ವರ್ಯಗೌಡ ಅವರನ್ನು ನನ್ನನ್ನು ಟ್ರ್ಯಾಪ್ ಮಾಡಲು ಬಿಟ್ಟರು. ನಾನು ಯಾವುದೇ ಟ್ರ್ಯಾಪ್‌ಗೆ ಒಳಗಾಗಿಲ್ಲ. ಟ್ರ್ಯಾಪ್ ಮಾಡಲು ಬಹಳ ಪ್ರಯತ್ನಪಟ್ಟರು.
ವಿನಯ್ ಕುಲಕರ್ಣಿ-ಐಶ್ವರ್ಯ ಗೌಡ ಮಧ್ಯೆ ಹಣದ ವ್ಯವಹಾರ ನಡೆದಿದ್ದು ಸತ್ಯ
ವಿನಯ್ ಕುಲಕರ್ಣಿ ಅವರ ಮಾವ ಅಣ್ಣಿಗೇರಿ ಮಹಾಂತೇಶ, ನಿಗಮ ಮಂಡಳಿ ಗುತ್ತಿಗೆದಾರ ರಮೇಶ್ ಸೇರಿ ಹಣದ ವ್ಯವಹಾರ ಮಾಡಿದ್ದಾರೆ. ವಿನಯ್ ಕುಲಕರ್ಣಿ ಹಾಗೂ ಐಶ್ವರ್ಯಗೌಡ ಮಧ್ಯೆ ಹಣದ ವ್ಯವಹಾರ ಆಗಿರುವುದು ನಿಜ. ಸುಮಾರು 24 ರಿಂದ 40 ಕೋಟಿ ವ್ಯವಹಾರ ಮಾಡಿದ್ದಾರೆ. ಇದಕ್ಕೆ ನಾನೇ ಸಾಕ್ಷಿ. ಒಂದು ಕೋಟಿಗೆ ದಿನಕ್ಕೆ ಒಂದು ಲಕ್ಷ ಬಡ್ಡಿಯಂತೆ ವ್ಯವಹಾರ ಆಗಿದೆ. ಈ ಎಲ್ಲ ವಿಷಯ ನನಗೆ ಗೊತ್ತಿವೆ.
ಇಲ್ಲಿಯವರೆಗೂ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಯಾರೇ ಕರೆದರೂ ಹೋಗಿ ನಾನು ಮಾಹಿತಿ ಹೇಳುವೆ. ಇಡಿಯವರು ನನ್ನನ್ನು ಕರೆದಿಲ್ಲ. ಕರೆದರೆ ಹೋಗಿ ಸಾಕ್ಷಿ ಹೇಳುವೆ. ಯೋಗೀಶಗೌಡರ ಕೊಲೆ ಕೇಸ್‌ನಲ್ಲಿ ನಾನು ಮಾಫಿ ಸಾಕ್ಷಿಯಾಗಿದ್ದೇನೆ. ಹೀಗಾಗಿ ನನ್ನನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಸಕ್ಸಸ್ ಆಗಿಲ್ಲ. ನನಗೆ ಬೆದರಿಕೆಗಳು ನಿರಂತರವಾಗಿವೆ. ಕೇಂದ್ರ ಪಡೆಯ ಭದ್ರತೆಯೊಳಗೆ ನಾನಿದ್ದೇನೆ. ಅಂಜಿಕೆಯೊಳಗೆ ನಾನು ಬದುಕುವಂತಾಗಿದೆ. ಕೆಲ ಆರೋಪಿಗಳು ನಮ್ಮ ಮನೆಗೆ ಬಂದು ಹೋದವರಿಗೆ ಬೆದರಿಕೆ ಹಾಕುತ್ತಿದಾರೆ. ನನ್ನ ಎಲ್ಲ ಸಂಪರ್ಕ ಬಂದ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುತ್ತಗಿ ಹೇಳಿದ್ದಾರೆ.