ಯೋಗೀಶ್ ಗೌಡರನ್ನು ಕೊಲೆ ಮಾಡಲು ಹೇಳಿದ್ದೇ ವಿನಯ್ ಕುಲಕರ್ಣಿ : ಆರೋಪಿ ಮುತ್ತಗಿ ಹೇಳಿಕೆ

ಧಾರವಾಡ : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕರ್ನಾಟಕದಲ್ಲಿ ತೀವ್ರ ಸಂಚಲನ ಉಂಟು ಮಾಡಿತ್ತು. ಯೋಗೀಶ್ ಗೌಡನನ್ನು ಕೊಲೆ ಮಾಡಿಸಿದ್ದೇ ಶಾಸಕ ವಿನಯ್ ಕುಲಕರ್ಣಿ ಎಂದು ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಆಪ್ತನೂ ಆಗಿರುವ ಬಸವರಾಜ ಮುತ್ತಗಿ ತಪ್ಪೊಪ್ಪಿಗೆ ಹೇಳಿಕೆಯಿಂದ ಶಾಸಕ ವಿನಯ್ ಕುಲಕರ್ಣಿ ಮೇಲಿನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ.
ಯೋಗೇಶ್ ಗೌಡ ಹತ್ಯೆಗೆ ಮೊದಲು ಧಾರವಾಡದ ವಿಕಾಸ್, ಕಲಬುರಗಿ ಕೀರ್ತಿ ಕುಮಾರ್ ಕುರಹಟ್ಟಿ, ವಿಕ್ರಂ ಬಳ್ಳಾರಿ, ಸಂದೀಪ್ ಸವದತ್ತಿ, ಮಹಾಬಲೇಶ್ವರ ಅವರಿಗೆ ಸುಪಾರಿ ನೀಡಲು ವಿನಯ್ ಕುಲಕರ್ಣಿ ನಿರ್ಧರಿಸಿದ್ದರು. ಅದರಂತೆ, ಈ ಹುಡುಗರು ಮುಂದೆ ವಿನಯ್ ಕುಲಕರ್ಣಿ ವಿಚಾರ ಪ್ರಸ್ತಾಪಿಸಲಾಯಿತು. ಆದರೆ, ಅವರು ತಿರಸ್ಕರಿಸಿದರು ಎಂದು ಮುತ್ತಗಿ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಾರೆ.
ಬಳಿಕ, ಮುತ್ತಗಿಯನ್ನು ಭೇಟಿಯಾದ ದಿನೇಶ್ ಹತ್ಯೆಗೆ ಒಪ್ಪಿಗೆ ಸೂಚಿಸಿ, 20 ಲಕ್ಷ ರೂ. ಬೇಡಿಕೆಯಿಟ್ಟನು. ಪ್ರಕರಣದಲ್ಲಿ ತನ್ನ ಹೆಸರು ಬರಬಾರದು, ಬಂಧನವಾಗದಂತೆ ನೋಡಿಕೊಳ್ಳಬೇಕು, ಜತಗೆ ಶರಣಾಗುವುದಿಲ್ಲ ಎಂಬ ಷರತ್ತು ವಿಧಿಸಿದ. ಈ ಮಾಹಿತಿಯನ್ನು ವಿನಯ್ ಕುಲಕರ್ಣಿಗೆ ತಲುಪಿಸಲಾಯಿತು ಎಂಬ ಅಂಶ ತಪ್ಪೊಪ್ಪಿಗೆಯಲ್ಲಿದೆ.
ಬೆಂಗಳೂರು ಹುಡುಗುರ ಷರತ್ತಿಗೆ ಒಪ್ಪಿದ ವಿನಯ್ ಕುಲರ್ಣಿ, ಹತ್ಯೆ ಬಳಿಕ ಧಾರವಾಡದ ಹುಡುಗರನ್ನು ಶರಣಾಗಿಸುವ ಯೋಚನೆ ಹೇಳಿದನು. ಜೂನ್ ಮೊದಲ ವಾರ ಬೆಂಗಳೂರಿನಿಂದ ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಸೇರಿ ಇತರರ ಗ್ಯಾಂಗ್ ಧಾರವಾಡಕ್ಕೆ ಬಂದಿತ್ತು. ಇದೇ ವೇಳೆ ವಿನಯ್ ಕುಲಕರ್ಣಿ ಮುತ್ತಗಿಗೆ ಮೂರು ಕಂಟ್ರಿ ಪಿಸ್ತೂಲು ನೀಡಿದ್ದರು. ಅವಶ್ಯಕತೆ ಬಿದ್ದರಷ್ಟೇ ಬಳಸಲು ಸೂಚನೆ ನೀಡಿದ್ದರು. ಯೋಗೀಶ್ ಗೌಡನನ್ನು ಕೊಲ್ಲೊವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ, ಅವಶ್ಯಕತೆ ಎನ್ನಿಸಿದರಷ್ಟೇ ಪಿಸ್ತೂಲು ಬಳಸಲು ಸೂಚನೆ ನೀಡಿದರು ಎಂದು ಹೇಳಲಾಗಿದೆ.
ವಿನಯ್ ಕುಲಕರ್ಣಿ ಸೋದರ ಮಾವ ವಿಜಯಪುರ ಮೂಲದ ಚಂದ್ರಶೇಖರ್ ಇಂಡಿ ಪಿಸ್ತೂಲು ತಂದುಕೊಟ್ಟನು. ಪಿಸ್ತೂಲುಗಳನ್ನು ಮುತ್ತಗಿ ಕೈಗೆ ಕೊಡುವಾಗ ವಿನಯ್ ಕುಲಕರ್ಣಿ ಇದ್ದರು. ಬಳಿಕ, ಮೇ ಮತ್ತು ಜೂನ್ ತಿಂಗಳಲ್ಲಿ ಎರಡು ಬಾರಿ ಕೊಲೆಗೆ ಯತ್ನಿಸಲಾಯಿತಾದರೂ ವಿಫಲವಾಯಿತು. ಕೊನೆಗೆ, 2016ರ ಜೂನ್ 15ರಂದು ಜಿಮ್ನಲ್ಲಿ ಯೋಗೀಶ್ ಗೌಡನನ್ನು ಹತ್ಯೆ ಮಾಡಲಾಯಿತು ಎಂಬ ಅಂಶ ತಪ್ಪೊಪ್ಪಿಗೆಯಲ್ಲಿದೆ.
ನಂ.1 ಆರೋಪಿ ಬಸವರಾಜ ಮುತ್ತಗಿ ಹೇಳಿದ್ದೇನು?
• ಬಿಜೆಪಿಗೆ ಯೋಗೇಶಗೌಡ ಗೌಡರ ಧಾರವಾಡ ಜಿಪಂ ಸದಸ್ಯರಾಗಿದ್ದರು
• ಅವರ ಏಳಿಗೆ ಸಹಿಸದೇ ಹತ್ಯೆಗೆ ಶಾಸಕ ವಿನಯ್ ಕುಲಕರ್ಣಿ ಅವರು ಸಂಚು ರೂಪಿಸಿದ್ದರು
• ಮೊದಲು ಧಾರವಾಡದ ಕೆಲವರಿಗೆ ಹತ್ಯೆಗೆ ಸುಪಾರಿ ನೀಡಲು ವಿನಯ್ ನಿರ್ಧರಿಸಿದ್ದರು . ಆದರೆ ಧಾರವಾಡ ಹುಡುಗರು ಒಪ್ಪದ ಕಾರಣ ಬೆಂಗಳೂರು ಯುವಕರಿಗೆ ಹತ್ಯೆ ಸುಪಾರಿ
• ದಿನೇಶ್ ಎಂಬಾತ ಹತ್ಯೆಗೆ ಒಪ್ಪಿ 20 ಲಕ್ಷ ರು.ಗೆ ಬೇಡಿಕೆ ಇರಿಸಿದ್ದ
• 2016ರಲ್ಲಿ ಮೊದಲ ಬಾರಿ ಒಮ್ಮೆ ಯೋಗೇಶ್ ಹತ್ಯೆಗೆ ವಿಫಲ ಯತ್ನ, ನಂತರ ಜೂನ್ನಲ್ಲಿ ಕೊಲೆ
• ಜನಪ್ರತಿನಿಧಿಗಳ ನ್ಯಾಯಾಲಯ ಮುಂದೆ ಮುತ್ತಗಿ ಹೇಳಿಕೆ




