ಬೀದರ್: ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯ ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆಯ ಸೀಲ್ ಓಪನ್ ಆಗಿದೆ ಎಂದು ಪರೀಕ್ಷಾರ್ಥಿಯೋರ್ವರು ಕೆಇಎಗೆ ದೂರು ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಭಾನುವಾರ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ ಬೀದರಿನ ದತ್ತಗಿರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಮೂಲದ ಸಂತೋಷ್ ಎಂಬ ಪರೀಕ್ಷಾರ್ಥಿ ಪರೀಕ್ಷೆಗೆ ಹಾಜರಾಗಿದ್ದರು.
ಪರೀಕ್ಷೆ ವೇಳೆ ಅಭ್ಯರ್ಥಿಗಳಿಗೆ ಸೀಲ್ ಓಪನ್ ಮಾಡಿದ ಪ್ರಶ್ನೆ ಪತ್ರಿಕೆ ಬಂದಿದ್ದಕ್ಕೆ ಪರೀಕ್ಷಾರ್ಥಿ ಅಸಮಧಾನಗೊಂಡಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟಾದ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಯಿಂದ ದೂರು ಸಲ್ಲಿಕೆಯಾಗಿದೆ.
ಮೊದಲೇ ಸೀಲ್ ಓಪನ್ ಮಾಡಿದ್ದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪರೀಕ್ಷಾ ಕೇಂದ್ರದ ಮೂಲಕ ಕೆಇಎಗೆ ಅಭ್ಯರ್ಥಿಯೇ ಮೇಲ್ ಮಾಡುವ ಮೂಲಕ ದೂರು ನೀಡಿದ್ದಾರೆ. ಭಾನುವಾರ ನಡೆದ ಪರೀಕ್ಷೆಯಲ್ಲಿ ಸೀಲ್ ಓಪನ್ ಆಗಿದ್ದನ್ನು ಗಮನಿಸಿ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಅನುಮಾನವನ್ನು ಅಭ್ಯರ್ಥಿ ವ್ಯಕ್ತಪಡಿಸಿದ್ದಾರೆ.