Freedom TV

ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾನೂ ಹಾರಿದ ಮಹಿಳೆ : ತಾಯಿ ಮಾತ್ರ ರಕ್ಷಣೆ, ಮಕ್ಕಳು ಜಲಸಮಾಧಿ

ವಿಜಯಪುರ : ಕೌಟುಂಬಿಕ ಕಲಹದ ಕಾರಣಕ್ಕೆ ಬೇಸತ್ತ ಮಹಿಳೆಯೊಬ್ಬರು ತನ್ನ ನಾಲ್ಕು ಚಿಕ್ಕ, ಚಿಕ್ಕ ಮಕ್ಕಳನ್ನು ರಭಸವಾಗಿ ಹರಿಯುತ್ತಿದ್ದ ನೀರಿನ ಕಾಲುವೆಗೆ ಬೀಸಾಡಿ, ನಂತರ ತಾನೂ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಆದರೆ, ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದು, ಪಾಪಿ ತಾಯಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಈ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ. ಇನ್ನು ಲಿಂಗರಾಜ್ ಭಜಂತ್ರಿ ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದರಿಂದ ನೊಂದಿದ್ದ ಲಿಂಗರಾಜ್, ಇದೇ ಸಿಟ್ಟಿನಲ್ಲಿ ಪತ್ನಿ ಭಾಗ್ಯಶ್ರೀ ಮೇಲೆ ಕೋಪಗೊಂಡು ಗಲಾಟೆ ಮಾಡುತ್ತಿದ್ದ. ಇದರಿಂದ ಮನನೊಂದಿದ್ದ ಭಾಗ್ಯಶ್ರೀ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾಳೆ.

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಬಂದು ನಾಲ್ಕು ಮಕ್ಕಳ ತಾಯಿ ಭಾಗ್ಯ ಭಜಂತ್ರಿ ನೀರಿಗೆ ಹಾರಿದ್ದಾರೆ. ಮೃತ ಮಕ್ಕಳನ್ನು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದವರು ಎಂದು ಗುರುತಿಸಲಾಗಿದೆ. ತನು ನಿಂಗರಾಜ‌ ಭಜಂತಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹಸೇನ ನಿಂಗರಾಜ ಭಜಂತ್ರಿ ಹಾಗೂ ಹುಸೇನ ನಿಂಗರಾಜ ಭಜಂತ್ರಿ (13 ತಿಂಗಳು) ಎಂದು ಗುರುತಿಸಲಾಗಿದೆ.

ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಲಿಂಗರಾಜ್ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಈ ಸಾಲವನ್ನು ತೀರಿಸಲು ಆಸ್ತಿ ಮಾರಾಟ ಮಾಡಲು ಚಿಂತನೆ ನಡೆಸಿದ್ದ. ಹೀಗಾಗಿ ತನ್ನ ಪಿತ್ರಾರ್ಜಿತ ಆಸ್ತಿ ಪಾಲು ಕೇಳಿದ್ದ.ಸಾಲ ತೀರಿಸಲು ತಂದೆಯ ಪಿತ್ರಾರ್ಜಿತ ಆಸ್ತಿಯ ಪಾಲು ಕೇಳಿದ್ದ. ಆದ್ರೆ, ಆಸ್ತಿಪಾಲಿನ ವಿಚಾರವಾಗಿ ನಿಂಗರಾಜ ಸಹೋದರರು ತಂದೆಯ ಜೊತೆ ಜಗಳವಾಡಿದ್ದಾರೆ. ಇದೇ ವಿಚಾರವಾಗಿ ಕಳೆದ ಹಲವಾರು ದಿನಗಳಿಂದ ಮನೆಯಲ್ಲಿ ಜಗಳ ಆಗಿತ್ತಂತೆ. ತಂದೆ ತಾಯಿ ಇರುವರೆಗೂ ಆಸ್ತಿಯಲ್ಲಿ ಪಾಲು ನೀಡಲ್ಲ ಎಂದು ನಿಂಗರಾಜ ಸಹೋದರರು ಜಗಳ ಮಾಡಿದ್ದರು. ಇದರಿಂದ ನಿಂಗರಾಜ ತೀವ್ರವಾಗಿ ನೊಂದಿದ್ದ. ಈ ಕಾರಣಕ್ಕಾಗಿ ಪತ್ನಿ ಭಾಗ್ಯಶ್ರೀ ಹಾಗೂ ಲಿಂಗರಾಜ ಮಧ್ಯೆ ಜಗಳವಾಗುತ್ತಿತ್ತು.

ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ಸ್ಥಳಕ್ಕೆ ನಿಡಗುಂದಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಇಬ್ಬರು ಗಂಡು ಮಕ್ಕಳ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಾಯಿಯ ನಿರ್ಧಾರಕ್ಕೆ 13 ತಿಂಗಳು, 3 ವರ್ಷ, 5 ವರ್ಷದ ಕಂದಮ್ಮಗಳು ಜೀವ ಕಳೆದುಕೊಂಡಿವೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ.

Comments (0)

Your email address will not be published. Required fields are marked *

Back to top button