ವಿಜಯಪುರ: ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭೂಕಂಪದ ಕಂಪನಗಳು ನಿರಂತರವಾಗಿ ಅನುಭವವಾಗುತ್ತಿದೆ. ಮಂಗಳವಾರ ಬೆಳಗ್ಗೆ ಮಣಿಪುರ ಸೇರಿದಂತೆ ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ಕರ್ನಾಟಕ ರಾಜ್ಯದಲ್ಲಿಯೂ ಭೂಕಂಪ ಸಂಭವಿಸುತ್ತಿರುವ ಕುರಿತು ಇದೀಗ ವರದಿಯಾಗುತ್ತಿದೆ.
ಹೌದು, ಗುಮ್ಮಟ ನಗರಿ ವಿಜಯಪುರದಲ್ಲಿ ನಿನ್ನೆ ತಡರಾತ್ರಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ರಾತ್ರಿ 12.22 ಹಾಗೂ ರಾತ್ರಿ 1.20 ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಒಟ್ಟು ಎರಡು ಬಾರಿ ಕಂಪಿಸಿರುವ ಭೂಮಿ. ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆಯಲ್ಲಿ ಭೂಮಿಯ 5 ಕಿ.ಮೀ ಆಳದಲ್ಲಿ ಸಂಭವಿಸಿರುವುದು ದಾಖಲಾಗಿದೆ ಅಲ್ಲದೇ ಭೂಕಂಪನದ ಮೊಬೈಲ್ ಆಪ್ ಗಳಲ್ಲೂ ಕಂಪನದ ತೀವ್ರತೆ ದಾಖಲಾಗಿದೆ.
ಭೂಮಿಯ 5 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ. ಭೂಕಂಪನದಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿನ ಸಾಮಾಗ್ರಿಗಳು ಚಲ್ಲಾಪಿಲ್ಲಿಯಾಗಿವೆ. ಪದೇ ಪದೆ ಭೂಕಂಪನದಿಂದ ಜನತೆ ಆತಂಕಗೊಂಡಿದ್ದಾರೆ. ಇನ್ನೂ ಈ ಭೂಕಂಪದಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಗುಮ್ಮಟ ನಗರಿ ವಿಜಯಪುರದಲ್ಲಿ ಪದೇಪದೆ ಭೂಕಂಪನ ಅನುಭವವಾಗುತ್ತಿದ್ದು, ಕಳೆದ ವರ್ಷವಂತೂ ಸುಮಾರು ಹತ್ತಕ್ಕೂ ಹೆಚ್ಚು ಸಲ ಈ ಪ್ರದೇಶದಲ್ಲಿ ಕಂಪನಗಳು ಸಂಭವಿಸಿತ್ತು. ಇದೀವ ವರ್ಷದ ಆರಂಭದಲ್ಲೇ ಭೂಕಂಪನ ಅನುಭವವಾಗಿದ್ದು, ಜನತೆ ಆತಂಕದಲ್ಲಿದ್ದಾರೆ.


