ವಿಜಯಪುರ: ಮತ್ತೊಂದು ಸುತ್ತಿಗೆ ವಿಜಯಪುರದಲ್ಲಿ ಗುಂಡಿನ ಸದ್ದು ಕೇಳಿಸಿದೆ.. ಇದರಿಂದಾಗಿ ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ಕಂಟ್ರೀ ಪಿಸ್ತೂಲ್ನಿಂದ ಗುಂಡಿನ ದಾಳಿ ಮಾಡಲಾಗಿದೆ.
ಗುಂಡಿನ ದಾಳಿಯಿಂದ ರಾಜು ನ್ಯಾಮಗೊಂಡ ಎಂಬುವರು ಗಾಯಗೊಂಡಿದ್ದಾರೆ. ಶಿವು ಜಗದಾಳೆ ಗುಂಡು ಹಾರಿಸಿದ ಆರೋಪಿ. ಘಟನೆಯಲ್ಲಿ ಗಾಯಗೊಂಡ ರಾಜು ನ್ಯಾಮಗೊಂಡ ಅವರನ್ನು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಸಂಬಂಧಿಕರಾಗಿದ್ದು ವೈಷಮ್ಯ ಹೊಂದಿದ್ದರು ಎನ್ನಲಾಗಿದೆ. ಆರೋಪಿ ಶಿವು ಜಗದಾಳೆ ಸಂಬಂಧಿ ರಾಜು ನ್ಯಾಮಗೊಂಡ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಶಿವು ಜಗದಾಳೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ರೋಣಿಹಾಳ ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಮತ್ತೊಂದು ಸುತ್ತಿಗೆ ಗುಂಡಿನ ಸದ್ದು ಕೇಳಿಸಿದ್ದು, ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ