66 ಪೈಸೆಗಾಗಿ ರೈತನ ಹೋರಾಟಕ್ಕೆ ಜಯ: ಬ್ಯಾಂಕಿಂಗ್ ವ್ಯವಸ್ಥೆಯ ಎಡವಟ್ಟಿಗೆ ಮುಕ್ತಿ!

ಸಕಲೇಶಪುರ: ಕೆನರಾ ಬ್ಯಾಂಕ್ ಶಾಖೆಯು ರೈತರೊಬ್ಬರ ಸಾಲದ ಖಾತೆಯಲ್ಲಿ ಬಾಕಿ ಉಳಿಸಿಕೊಂಡಿದ್ದ ಕೇವಲ 66 ಪೈಸೆಯನ್ನು ಕೊನೆಗೂ ಅವರ ಖಾತೆಗೆ ಜಮೆ ಮಾಡುವ ಮೂಲಕ ಅಪರೂಪ ಎನಿಸುವ ಪ್ರಕರಣವೊಂದಕ್ಕೆ ತೆರೆ ಎಳೆದಿದೆ. ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ ಅವರು ಕಳೆದ ವರ್ಷ ಬ್ಯಾಂಕಿನಿಂದ ಪಡೆದಿದ್ದ 50 ಸಾವಿರ ರೂಪಾಯಿ ಸಾಲವನ್ನು ಬಡ್ಡಿ ಸಮೇತ ಮರುಪಾವತಿಸಿದ್ದರು. ಆದರೆ, ಫೆಬ್ರವರಿ 25 ರಂದು ಬ್ಯಾಂಕಿನಿಂದ ಬಂದ ಕರೆಯೊಂದರಲ್ಲಿ ಅವರು ಇನ್ನೂ 9 ರೂಪಾಯಿ 34 ಪೈಸೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿತ್ತು.
ಮರುದಿನವೇ ಬ್ಯಾಂಕಿಗೆ ತೆರಳಿದ ಚೊಕ್ಕಣ್ಣಗೌಡ ಅವರು 10 ರೂಪಾಯಿ ಪಾವತಿಸಿ ಸಾಲದ ಖಾತೆಯನ್ನು ಪೂರ್ಣವಾಗಿ ಚುಕ್ತಾ ಮಾಡಲು ಮುಂದಾಗಿದ್ದರು. ಆದರೆ, ಬ್ಯಾಂಕ್ ಸಿಬ್ಬಂದಿ ಕೇವಲ 9 ರೂಪಾಯಿ 34 ಪೈಸೆಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡು, ಉಳಿದ 66 ಪೈಸೆಯನ್ನು ಅವರಿಗೆ ಹಿಂತಿರುಗಿಸದೆ ಬಾಕಿ ಉಳಿಸಿಕೊಂಡಿದ್ದರು. ಈ ಸಣ್ಣ ಮೊತ್ತದ ವಿಷಯವಾಗಿ ರೈತರು ಪಟ್ಟು ಹಿಡಿದಿದ್ದು, . ಸಾವಿರಾರು ಕೋಟಿ ಸಾಲ ಮಾಡಿ ಪರಾರಿಯಾಗುವವರನ್ನು ಬಿಟ್ಟು, ಪ್ರಾಮಾಣಿಕವಾಗಿ ಸಾಲ ತೀರಿಸುವ ಬಡ ರೈತರಿಗೆ ಇಂತಹ ತಾಂತ್ರಿಕ ಕಾರಣಗಳಿಂದ ತೊಂದರೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ವಿಷಯ ಗಂಭೀರ ಸ್ವರೂಪ ಪಡೆದು ಮೇಲಾಧಿಕಾರಿಗಳ ಗಮನಕ್ಕೆ ಬಂದ ನಂತರ, ಬ್ಯಾಂಕ್ ಎಚ್ಚೆತ್ತುಕೊಂಡು ರೈತನ ಖಾತೆಗೆ ಆ 66 ಪೈಸೆಯನ್ನು ಜಮೆ ಮಾಡಿ ಮೊಬೈಲ್ ಸಂದೇಶದ ಮೂಲಕ ಮಾಹಿತಿ ನೀಡಿದೆ. ಈ ಕುರಿತು ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಸಾಲ ಮರುಪಾವತಿಗೆ ಮಾನವಚಾಲಿತ ಕರೆ ಹೋಗಿಲ್ಲ, ಬದಲಿಗೆ ಕಂಪ್ಯೂಟರೈಸ್ಡ್ ಟೆಲಿಕಾಲ್ ವ್ಯವಸ್ಥೆಯಿಂದ ಸ್ವಯಂಚಾಲಿತವಾಗಿ ಕರೆ ಹೋಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.




