ಮೈಸೂರು: ಕನ್ನಡದ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರು ಸೆಪ್ಟೆಂಬರ್ 24 ರಂದು ನಿಧನರಾದರು. ಇಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿದೆ.
ಪೊಲೀಸರು ಮೂರು ಸುತ್ತು ಕುಶಾಲ ತೋಪು ಸಿಡಿಸಿ ಈ ಮಹಾನ್ ಸಾಹಿತಿಗೆ ಗೌರವ ಸಲ್ಲಿಸಿದರು.
ಪಾರ್ಥಿವ ಶರೀರಕ್ಕೆ ಮಾನಸ ಪುತ್ರಿ ಸಹನಾ ವಿಜಯಕುಮಾರ್ ಅವರು ಅಂತಿಮ ನಮನ ಸಲ್ಲಿಸಿದ ಬಳಿಕ ಪುತ್ರರು ಅಗ್ನಿಸ್ಪರ್ಶ ಮಾಡಿದರು. ಇಂದು ಬೆಳಗ್ಗೆಯಿಂದಲೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿತ್ತು. ಕುಟುಂಬಸ್ಥರು, ಗಣ್ಯರು ಅಂತ್ಯಸಂಸ್ಕಾರ ವೀಕ್ಷಣೆಗೆ ಜರ್ಮನ್ ಟೆಂಟ್ ಹಾಕಿ ಕುರ್ಚಿಗಳನ್ನಿಟ್ಟು ವ್ಯವಸ್ಥೆ ಮಾಡಲಾಗಿತ್ತು. ಮೈಸೂರು ಎಡಿಸಿ ಶಿವರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಸಕಲ ಸಿದ್ಧತೆ ಪರಿಶೀಲಿಸಿದ್ದರು, ಪೊಲೀಸ್ ಭದ್ರತೆಯನ್ನೂ ನಿಯೋಜಿಸಲಾಗಿತ್ತು.


