Saturday, February 14, 2026
18.6 C
Bengaluru
Google search engine
LIVE
ಮನೆಸಿನಿಮಾಬೆಳ್ಳಿಪರದೆಗೆ 'ವೀರ ಕಂಬಳ'; ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಟನೆ

ಬೆಳ್ಳಿಪರದೆಗೆ ‘ವೀರ ಕಂಬಳ’; ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಟನೆ

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಹತ್ವಾಕಾಂಕ್ಷೆಯ ಚಿತ್ರ ‘ವೀರ ಕಂಬಳ’ ಇದೇ ಫೆಬ್ರವರಿ 27ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಈ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ವಿಶೇಷ ಪಾತ್ರವೊಂದರಲ್ಲಿ ನಟಿಸಿರುವುದು ಚಿತ್ರದ ತೂಕವನ್ನು ಹೆಚ್ಚಿಸಿದೆ. ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳದ ಸುಮಾರು 700 ವರ್ಷಗಳ ಸುದೀರ್ಘ ಇತಿಹಾಸವನ್ನು ತೆರೆಯ ಮೇಲೆ ತರಲು ಹೊರಟಿರುವ ಈ ಚಿತ್ರಕ್ಕಾಗಿ, ಸ್ವತಃ ಹೆಗ್ಗಡೆಯವರೇ ಬಣ್ಣ ಹಚ್ಚಿರುವುದು ದೊಡ್ಡ ವಿಶೇಷತೆಯಾಗಿದೆ. ಚಿತ್ರತಂಡವು ಇದುವರೆಗೆ ಈ ವಿಚಾರವನ್ನು ಗೌಪ್ಯವಾಗಿಟ್ಟಿದ್ದರೂ, ಇದೀಗ ನಿರ್ದೇಶಕರು ಈ ಪಾತ್ರದ ಹಿನ್ನೆಲೆಯನ್ನು ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.

1970ರ ದಶಕದಲ್ಲಿ ಕೇವಲ ಖಾಸಗಿ ಮನೋರಂಜನೆಯಾಗಿದ್ದ ಕಂಬಳವನ್ನು ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಆಯೋಜಿಸಿ, ಜನಪ್ರಿಯಗೊಳಿಸಿದ ಕೀರ್ತಿ ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ. ಈ ಕಾರಣಕ್ಕಾಗಿಯೇ ಕಂಬಳದ ಇತಿಹಾಸ ಅರಿಯುತ್ತಾ ಹೋದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ, ಈ ಕ್ರೀಡೆಗೆ ಹೆಗ್ಗಡೆಯವರು ನೀಡಿದ ಕೊಡುಗೆ ಬೆರಗು ಮೂಡಿಸಿತ್ತು. ಸಿನಿಮಾದ ಆತ್ಮದಂತಿರುವ ಮತ್ತು ಸಮಾಜಕ್ಕೆ ಮೌಲಿಕ ಸಂದೇಶ ನೀಡುವ ಅತ್ಯಂತ ಮಹತ್ವದ ಪಾತ್ರಕ್ಕಾಗಿ ಹೆಗ್ಗಡೆಯವರನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ಕಂಬಳದ ಮೇಲಿರುವ ವಿಶೇಷ ಪ್ರೀತಿಯಿಂದಾಗಿ ಹೆಗ್ಗಡೆಯವರು ಕೂಡ ಸಂತೋಷದಿಂದಲೇ ಚಿತ್ರೀಕರಣದಲ್ಲಿ ಭಾಗವಹಿಸಿ ನಟಿಸಿರುವುದು ಚಿತ್ರತಂಡಕ್ಕೆ ಹೆಮ್ಮೆಯ ವಿಚಾರವಾಗಿದೆ.

ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರಕಾಶ್ ರೈ, ರವಿಶಂಕರ್ ಮತ್ತು ರಾಧಿಕಾ ಚೇತನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದಲ್ಲಿ ನವೀನ್ ಪಡೀಲ್, ಭೋಜರಾಜ್ ವಾಮಂಜೂರು ಸೇರಿದಂತೆ ತುಳು ರಂಗಭೂಮಿಯ ಖ್ಯಾತ ಕಲಾವಿದರು ನಟಿಸಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ ಹಾಗೂ ಆರ್. ಗಿರಿ ಅವರ ಛಾಯಾಗ್ರಹಣವಿರುವ ಈ ‘ವೀರ ಕಂಬಳ’ ಫೆಬ್ರವರಿ 27ರಂದು ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments