Top Newsಸುದ್ದಿ

ಮುತ್ತೈದೆಯರ ವರಮಹಾಲಕ್ಷ್ಮೀ

ಶ್ರಾವಣವು ಹಬ್ಬಗಳ ಮಾಸವಾಗಿದೆ. ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರಪಂಚಮಿ. ಇದರ ನಂತರ ಪೌರ್ಣಮಿಗಿಂತ ಮೊದಲು ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಮ್ಮೆ ಶುಕ್ರವಾರ ಹುಣ್ಣಿಮೆ ಬಂದರೆ ಅಂದೇ ವರಮಹಾಲಕ್ಷ್ಮೀ ವ್ರತ. ಈ ಶುಕ್ರವಾರಕ್ಕೆ ‘ಸಂಪತ್ ಶುಕ್ರವಾರ’ ಎಂಬ ಹೆಸರೂ ಇದೆ. ವರಮಹಾಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ.

ಲಕ್ಷ್ಮೀ’ ಎಂದರೆ ಎಲ್ಲವನ್ನೂ ಯಾವಾಗಲೂ ನೋಡುತ್ತಿರುವವಳು ಎಂದರ್ಥ. ಸರ್ವಸಾಕ್ಷಿಯಾಗಿರುವ ಭಗವಂತನೊಡನೆ ನಿತ್ಯಯೋಗವನ್ನು ಹೊಂದಿ ಸರ್ವಜ್ಞಳಾಗಿರುವಾಕೆಯೇ ‘ಲಕ್ಷ್ಮೀ’. ಲಕ್ಷ್ಮೀ ಸಂಪತ್ತಿನ ಅಧಿದೇವತೆ, ಅವಳ ಅನುಗ್ರಹವಾದರೆ ಮನೆಯಲ್ಲಿ ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯಲಕ್ಷ್ಮೀ, ಸಂತಾನಲಕ್ಷ್ಮಿ, ವಿದ್ಯಾಲಕ್ಷ್ಮೀ, ವಿಜಯಲಕ್ಷ್ಮೀ, ಕೀರ್ತಿಲಕ್ಷ್ಮಿ, ಮೋಕ್ಷ ಲಕ್ಷ್ಮಿ ಎಲ್ಲವೂ ನೆಲೆಸುತ್ತವೆ. ಆದ್ದರಿಂದ ಸಿರಿ ಸೌಭಾಗ್ಯ ಸಂಪದಭಿವೃದ್ಧಿಗಾಗಿ ಸುಮಂಗಲಿಯರು, ಪುರುಷರು ಈ ವ್ರತವನ್ನು ಆಚರಿಸುತ್ತಾರೆ.

ಮಹಾಲಕ್ಷ್ಮೀಯ ಜನನ
ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಕಥೆಯಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದಾರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಲಕ್ಷ್ಮೀ ಉದ್ಭವಿಸುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮೀ ಆರಾಧನೆಗಾಗಿ ಈ ಹಬ್ಬವಾಗಿದೆ. ಪ್ರತಿವರ್ಷವೂ ಲಕ್ಷ್ಮೀಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ.

Comments (0)

Your email address will not be published. Required fields are marked *

Back to top button