Freedom TV

ಇರಾನ್ ಮೇಲೆ ಅಮೆರಿಕದ ‘ಬಂಕರ್ ಬಸ್ಟರ್’ ದಾಳಿ..!

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷವು 19ನೇ ದಿನಕ್ಕೆ ಕಾಲಿಟ್ಟಿದ್ದು, ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯ ನಾಡಿಮಿಡಿತದಂತಿರುವ ಹಾರ್ಮುಜ್ ಜಲಸಂಧಿಯ ಬಳಿ ಯುದ್ಧದ ಭೀಕರತೆ ಹೆಚ್ಚಾಗಿದೆ. ಇರಾನ್ ನಿಯಂತ್ರಣದಲ್ಲಿದ್ದ ಈ ಆಯಕಟ್ಟಿನ ಪ್ರದೇಶದ ಮೇಲೆ ಅಮೆರಿಕ ಸೇನೆಯು ಭೀಕರ ದಾಳಿ ನಡೆಸಿದ್ದು, ಕರಾವಳಿಯುದ್ದಕ್ಕೂ ಇದ್ದ ಇರಾನಿನ ಕ್ಷಿಪಣಿ ತಾಣಗಳನ್ನು ಧ್ವಂಸಗೊಳಿಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರಕಟಿಸಿದೆ. ಅಂತರರಾಷ್ಟ್ರೀಯ ಹಡಗು ಸಂಚಾರಕ್ಕೆ ಅಡ್ಡಿಯಾಗಿದ್ದ ಇರಾನಿನ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ.

ಈ ಕಾರ್ಯಾಚರಣೆಗಾಗಿ ಅಮೆರಿಕ ತನ್ನ ಶಸ್ತ್ರಾಗಾರದಲ್ಲಿರುವ ಅತ್ಯಂತ ಶಕ್ತಿಶಾಲಿ 5,000 ಪೌಂಡ್ ತೂಕದ ‘ಬಂಕರ್ ಬಸ್ಟರ್’ ಬಾಂಬ್‌ಗಳನ್ನು ಬಳಸಿದೆ. ವಿಶ್ವದ ಒಟ್ಟು ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ವಹಿವಾಟು ನಡೆಯುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದ್ದರಿಂದ ಜಾಗತಿಕವಾಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಈ ನಿರ್ಣಾಯಕ ಜಲಮಾರ್ಗವನ್ನು ಪುನಃ ಮುಕ್ತಗೊಳಿಸುವ ಉದ್ದೇಶದಿಂದಲೇ ಅಮೆರಿಕ ಈ ಬೃಹತ್ ಬಾಂಬ್ ದಾಳಿಯನ್ನು ಸಂಘಟಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತಗೊಳಿಸಲು ಮತ್ತು ತೈಲ ರಫ್ತಿನ ಮೇಲಿನ ದಿಗ್ಬಂಧನ ಸಡಿಲಿಸಲು ಮಿತ್ರರಾಷ್ಟ್ರಗಳ ನೆರವು ಕೋರಿದ್ದರು. ಆದರೆ ನ್ಯಾಟೋ ಸೇರಿದಂತೆ ಅಮೆರಿಕದ ಹಲವು ಮಿತ್ರರಾಷ್ಟ್ರಗಳು ಈ ಮನವಿಯನ್ನು ತಿರಸ್ಕರಿಸಿದ್ದವು. ಈ ಹಿನ್ನೆಲೆಯಲ್ಲಿ ಮಾತನಾಡಿದ್ದ ಟ್ರಂಪ್, ಜಗತ್ತು ನಮ್ಮ ಪ್ರಯತ್ನಗಳನ್ನು ಗುರುತಿಸದಿದ್ದರೂ ಪರವಾಗಿಲ್ಲ, ನಾವು ವಿಶ್ವದ ಒಳಿತಿಗಾಗಿ ಈ ಯುದ್ಧ ನಡೆಸುತ್ತಿದ್ದೇವೆ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button