KODAGU

ಇಸ್ರೇಲ್ ಭೇಟಿಯ ರಹಸ್ಯ ಬಿಚ್ಚಿಡಿ; ಕೇಂದ್ರಕ್ಕೆ ಎ.ಎಸ್. ಪೊನ್ನಣ್ಣ ಸವಾಲ್!

ಕೊಡಗು : ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಮತ್ತು ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತ ಮತ್ತು ಇರಾನ್ ನಡುವೆ 1953ರಿಂದಲೂ ಅಂದರೆ ಸುಮಾರು 75 ವರ್ಷಗಳ ಸುದೀರ್ಘ ಸ್ನೇಹ ಸಂಬಂಧವಿದ್ದು, ಪ್ರಸ್ತುತ ಯುದ್ಧದ ಹಿನ್ನೆಲೆಯಲ್ಲಿ ಹರ್ಮುಜ್ ಜಲಸಂಧಿ ಮಾರ್ಗ ಬಂದ್ ಆಗಿರುವುದು ಕಳವಳಕಾರಿ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಉದ್ದೇಶಕ್ಕಾಗಿ ಇಸ್ರೇಲ್‌ಗೆ ಭೇಟಿ ನೀಡಿದ್ದರು ಎಂಬುದನ್ನು ಈಗ ನಡೆಯುತ್ತಿರುವ ಸಂಸತ್ ಕಲಾಪದಲ್ಲಿ ದೇಶದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲೇ ವಾಣಿಜ್ಯ ಸಿಲಿಂಡರ್‌ಗಳ ಅಭಾವ ತಲೆದೂರಿರುವುದು ಸತ್ಯವಾಗಿದ್ದು, ಈ ಬಿಕ್ಕಟ್ಟಿಗೆ ಮೂಲ ಕಾರಣವನ್ನು ಕೇಂದ್ರ ಸರ್ಕಾರ ಪತ್ತೆಹಚ್ಚಬೇಕಿದೆ ಎಂದು ಪೊನ್ನಣ್ಣ ಕಿಡಿಕಾರಿದ್ದಾರೆ. ಇಸ್ರೇಲ್ ಎಷ್ಟೇ ಶಕ್ತಿಶಾಲಿ ರಾಷ್ಟ್ರವಾಗಿದ್ದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅದರಿಂದ ದೊಡ್ಡ ಮಟ್ಟದ ಪ್ರಯೋಜನಗಳಿಲ್ಲ . ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಅಂದಿನ ಸೋವಿಯತ್ ಒಕ್ಕೂಟ ಮತ್ತು ಇಂದಿನ ರಷ್ಯಾ ಐತಿಹಾಸಿಕ ಸ್ನೇಹ ರಾಷ್ಟ್ರಗಳಾಗಿದ್ದವು, ಆದರೆ ಪ್ರಸ್ತುತ ಕೇಂದ್ರ ಸರ್ಕಾರವು ಅಮೆರಿಕದ ಒತ್ತಡಕ್ಕೆ ಮಣಿದು ಈ ಸಂಬಂಧಗಳನ್ನು ಕೆಡಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಪರಿಸ್ಥಿತಿಯ ಕುರಿತು ಮಾತನಾಡಿದ ಶಾಸಕರು, ಡಾಲರ್ ಎದುರು ರೂಪಾಯಿ ಮೌಲ್ಯವು 92 ರೂಪಾಯಿಗೆ ಕುಸಿದಿರುವುದನ್ನು ತೀವ್ರವಾಗಿ ಟೀಕಿಸಿದರು. ಹಿಂದೆ ಡಾಲರ್ ಬೆಲೆ 60 ರೂಪಾಯಿ ಆದಾಗ ತಲೆಮೇಲೆ ಸಿಲಿಂಡರ್ ಹೊತ್ತು ಹೋರಾಟ ಮಾಡಿದವರು ಇಂದು ಎಲ್ಲಿ ಹೋಗಿದ್ದಾರೆ , ಬಡ ಮತ್ತು ಮಧ್ಯಮ ವರ್ಗದವರು ಮದುವೆ ಮಾಡಲು ಸಾಧ್ಯವಾಗದಷ್ಟು ಚಿನ್ನದ ಬೆಲೆ ಏರಿಕೆಯಾಗಿದೆ ಎಂದು ದೂರಿದರು. ಯುದ್ಧಕ್ಕಿಂತ ಮೊದಲು 400 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಇಂದು ಜನ ಸಾಮಾನ್ಯರಿಗೆ ಹೊರೆಯಾಗಿದ್ದು, ಪ್ರೀಮಿಯಂ ಪೆಟ್ರೋಲ್ ದರ ಏರಿಕೆಯು ಮುಂದಿನ ದಿನಗಳಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ಏರಿಕೆಗೂ ಮುನ್ಸೂಚನೆಯಾಗಿದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷವು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರವಾದಿ ಪಕ್ಷವಾಗಿದ್ದರೂ, ಇಂದು ನಮಗೆ ‘ದೇಶವಿರೋಧಿ’ ಎಂಬ ಪಟ್ಟ ಕಟ್ಟಲಾಗುತ್ತಿದೆ . ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರಿಗೆ ಶರಣಾಗುತ್ತೇವೆ ಎಂದು ಪತ್ರ ಬರೆದವರು ಇಂದು ಸ್ವಾತಂತ್ರ್ಯ ಹೋರಾಟಗಾರರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ , ಭಾರತವು ರಷ್ಯಾ ಮತ್ತು ಇರಾನ್ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಬೇಕಿತ್ತು ಎಂದರು. ಅಮೆರಿಕದ ದಬ್ಬಾಳಿಕೆಯ ವಿರುದ್ಧ ಭಾರತ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ ಎಂದು ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button