ಮತದಾನದ ವೇಳೆಯಲ್ಲೇ ಜೆಡಿಎಸ್ ಸದಸ್ಯರಿಗೆ ಹಣದ ಆಮಿಷ ಒಡ್ಡಿದ ಶಾಸಕ!

ಕಣ್ಸನ್ನೇ, ಕೈಸನ್ನೇ ಮೂಲಕ ಹಣದ ಆಮೀಷ ಒಡ್ಡಿದ ಮಂಡ್ಯ ಶಾಸಕ

ಮಂಡ್ಯ: ಇಲ್ಲಿನ ನಗರಸಭೆ ಚುನಾವಣೆ ಮತದಾನದ ವೇಳೆಯಲ್ಲೇ ಚುನಾವಣಾಧಿಕಾರಿ ಸಮಕ್ಷಮದಲ್ಲಿಯೇ ಸ್ಥಳೀಯ ಶಾಸಕರು ನಮ್ಮ ಪಕ್ಷದ ಸದಸ್ಯರಿಗೆ ಅಡ್ಡ ಮತದಾನಕ್ಕೆ ಕುಮ್ಮಕ್ಕು ನೀಡಿ ಕಣ್ಸನ್ನೇ, ಕೈಸನ್ನೇ ಮೂಲಕ ಹಣದ ಆಮೀಷ ಒಡ್ಡಿದರು ಎಂದು ಮಂಡ್ಯ ಲೋಕಸಭೆ ಸದಸ್ಯರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಅತ್ಯಂತ ಗಂಭೀರ ಆರೋಪ ಮಾಡಿದರು.

ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ವಾಮಮಾರ್ಗದಲ್ಲಿ ಜೆಡಿಎಸ್ ಬಿಜೆಪಿ ಪಕ್ಷಗಳು ಅಧಿಕಾರ ಹಿಡಿದವು ಎಂದು ಶಾಸಕ ಗಣಿಗ ರವಿ ನೀಡಿರುವ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವರು; ಶಾಸಕರ ಪ್ರಕಾರ ವಾಮಮಾರ್ಗದ ಅರ್ಥವೇನು? ಮತದಾನದ ವೇಳೆಯಲ್ಲಿಯೂ ಕಣ್ಸನ್ನೇ, ಕೈಸನ್ನೇ ಮೂಲಕ ನಮ್ಮ ಸದಸ್ಯರಿಗೆ ಹಣದ ಆಮೀಷ ಒಡ್ಡಿದ್ದು ವಾಮಮಾರ್ಗ ಅಲ್ಲದೆ ಮತ್ತೇನು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ನನ್ನ ಜೀವನದಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ ಹಾಕಲು ಬಂದಿದ್ದೇನೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿ ನಾನು ಬರಲೇಬೇಕಾಯಿತು. ದೆಹಲಿಯಲ್ಲಿ ಸಚಿವ ಸಂಪುಟದ ಸಭೆ ನಿಗದಿ ಆಗಿತ್ತು. ನಾನು ಪ್ರಧಾನಮಂತ್ರಿಗಳ ಕಚೇರಿಯ ಅನುಮತಿ ಪಡೆದು ಮತದಾನದಲ್ಲಿ ಭಾಗವಹಿಸಿದೆ. ಕಾಂಗ್ರೆಸ್ ಈ ಜಿಲ್ಲೆಯಲ್ಲಿ ಅಷ್ಟರ ಮಟ್ಟಿಗೆ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಅವರು ಪ್ರಹಾರ ನಡೆಸಿದರು.

ಚುನಾವಣೆ ಸೋಲಿನ ಭಯದಲ್ಲಿ ಚುನಾವಣೆ ಮುಂದೂಡುವುದರಲ್ಲಿ ಕಾಂಗ್ರೆಸ್ ಎಕ್ಸ್ ಪರ್ಟ್.
ಶಾಂತಿಯುತವಾಗಿ ಚುನಾವಣೆ ನಡೆಯಲು ಅಧಿಕಾರಿಗಳು ಸಹಕರಿಸಿದ್ದಾರೆ. ಆದರೆ, ಏನಾದರೂ ಕಿತಾಪತಿ ಮಾಡುವುದಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಹಿಂದಿನ ಅಧ್ಯಕ್ಷರು ವ್ಯಾಪಾರ ಶುರು ಮಾಡಿದರು. ನಮ್ಮ‌ ಪಕ್ಷದಿಂದ ಗೆದ್ದು ಯಾವ ರೀತಿ ನಡೆದುಕೊಂಡರು ಎನ್ನುವುದು ಗೊತ್ತಿದೆ. ಮಹದೇವು ನಿಷ್ಠಾವಂತ ಜೆಡಿಎಸ್ ಸದಸ್ಯರು. ಪಕ್ಷ ನಿಷ್ಠೆಗೆ ಬೆಲೆ ಕೊಟ್ಟು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿಲ್ಲ. ಕಾಂಗ್ರೆಸ್ ನಾಯಕರು ಇವರ ಕುಟುಂಬದ ಸದಸ್ಯರನ್ನು ಬ್ಲಾಕ್ ಮೇಲ್ ಮಾಡಿದರು. ಮಹದೇವು ಅವರು ತೆಗೆದುಕೊಂಡ ನಿರ್ಧಾರ ಪಕ್ಷನಿಷ್ಠೆಗೆ ಮಾದರಿಯಾಗಿದೆ ಎಂದರು ಸಚಿವರು.

ನಂತರ ಸಚಿವರು ನಗರಸಭೆ ಸದಸ್ಯರಾದ ಮಹದೇವು, ರಾಮಲಿಂಗಯ್ಯ, ವಿಶಾಲಾಕ್ಷಿ ಅವರ ಮನೆಗಳಿಗೆ ಭೇಟಿ ನೀಡಿದರು.

By admin

Leave a Reply

Your email address will not be published. Required fields are marked *

Verified by MonsterInsights