ರಾಜ್ಯ

ರಾಜ್ಯದಲ್ಲಿ ಅನಿರೀಕ್ಷಿತ ಆಲಿಕಲ್ಲು ಮಳೆ: ಬಿಸಿಯ ನಡುವೆ ತಂಪಾದ ಭೂಮಿ!

ರಾಜ್ಯದಲ್ಲಿ ಸುಡುತ್ತಿದ್ದ ಕಡು ಬಿಸಿಲಿನ ಬೇಗೆಯ ನಡುವೆಯೇ ವರುಣದೇವ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟಿದ್ದಾನೆ. ಮಾರ್ಚ್ 18ರಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದು, ಭೂಮಿ ತಂಪಾಗಿದೆಯಾದರೂ ರೈತರ ಬದುಕು ಮಾತ್ರ ಬೀದಿಗೆ ಬಿದ್ದಿದೆ. ನಗರದ ಕೆ.ಆರ್. ಪುರಂ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯ ಆರ್ಭಟ ಜೋರಾಗಿತ್ತು. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ 20ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಯಿತು.

ಧಾರಾಕಾರವಾಗಿ ಸುರಿದ ಮಳೆಗೆ ನೆಲಮಂಗಲದ ಬಸವನಹಳ್ಳಿ ಕ್ರಾಸ್ ಬಳಿ ಬೃಹತ್ ನೇಮ್ ಬೋರ್ಡ್ ಪಿಲ್ಲರ್ ಉರುಳಿಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಕೃಷಿ ವಲಯಕ್ಕೆ ಈ ಮಳೆ ದೊಡ್ಡ ಹೊಡೆತ ನೀಡಿದೆ. ಚಾಮರಾಜನಗರದ ಕಡುವಿನಕಟ್ಟೆಹುಂಡಿಯಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಕೋಲಾರ ಭಾಗದಲ್ಲಿ ಮಳೆಯ ಅಬ್ಬರಕ್ಕೆ ಮಾವಿನ ಹೂವು ಮತ್ತು ಕಾಯಿಗಳು ಉದುರಿ ಹೋಗಿದ್ದು, ದ್ರಾಕ್ಷಿ ಬೆಳೆಗಾರರು ರೋಗಭೀತಿಯ ಆತಂಕ ಎದುರಿಸುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆಯಿಂದಾಗಿ ರಸ್ತೆಗಳೆಲ್ಲಾ ಬಿಳಿ ಮಂಜಿನಿಂದ ಆವೃತವಾಗಿದ್ದು, ನೋಡಲು ಕಾಶ್ಮೀರದಂತಹ ದೃಶ್ಯ ನಿರ್ಮಾಣವಾಗಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದರಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಮೈಸೂರಿನ ಹುಣಸೂರು ತಾಲೂಕಿನ ದಾಸನಪುರದಲ್ಲಿ ಶಾಲೆಯೊಂದರ ಮೇಲ್ಚಾವಣಿ ಹಾರಿಹೋಗಿದ್ದು, ಶಿಕ್ಷಕರ ಸಮಯಪ್ರಜ್ಞೆಯಿಂದಾಗಿ ಶಾಲಾ ಮಕ್ಕಳು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರಿನ ಕಡಬ, ದಾವಣಗೆರೆಯ ಗುಡಾಳ್ ಗ್ರಾಮ ಮತ್ತು ಬಾಗಲಕೋಟೆಯಲ್ಲಿಯೂ ಉತ್ತಮ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಈ ಮಳೆ ತುಸು ನೆಮ್ಮದಿ ನೀಡಿದೆಯಾದರೂ, ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ನಾಶವಾಗಿರುವುದು ರೈತರ ಕಣ್ಣೀರಿಗೆ ಕಾರಣವಾಗಿದೆ. ಪ್ರಕೃತಿಯ ಈ ವಿಚಿತ್ರ ಆಟದಿಂದಾಗಿ ಒಂದು ಕಡೆ ತಂಪು ವಾತಾವರಣ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಅನ್ನದಾತನ ಬದುಕು ದುಸ್ತರವಾಗಿದೆ.

Comments (0)

Your email address will not be published. Required fields are marked *

Back to top button