
ಮೆಗಾಸ್ಟಾರ್ ಚಿರಂಜೀವಿ ತೆಲುಗಿನ ಲಿಜೆಂಡರಿ ನಟ ಇದೀಗ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಮತ್ತೊಬ್ಬ ತೆಲುಗಿನ ಸ್ಟಾರ್ ನಟ ಎಂಟ್ರಿ ಆಗಿದ್ದಾರೆ. ಸ್ಟಾರ್ ನಟರು ಒಟ್ಟಿಗೆ ಸಿನಿಮಾ ಮಾಡುವುದು ಅಪರೂಪ. ಅದರಲ್ಲೂ ಇಬ್ಬರು ಸೂಪರ್ ಸ್ಟಾರ್ಗಳು, ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟರಾಗಿದ್ದು, ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುವುದು ಅಪರೂಪ.
ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರು ಜೂ. ಎನ್ಟಿಆರ್-ರಾಮ್ ಚರಣ್ ಅವರ ಜೊತೆಗೆ ಸಿನಿಮಾ ಮಾಡಿ ಅದ್ಭುತ ಯಶಸ್ಸು ಕಂಡರು. ಇದೀಗ ಮತ್ತೆ ಟಾಲಿವುಡ್ನ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ.
ತೆಲುಗಿನ ಹಿರಿಯ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ವಿಕ್ಟರಿ ವೆಂಕಟೇಶ್ ಅವರು ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾನಲ್ಲಿ ನಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ಈ ಇಬ್ಬರು ನಟರು ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಿದ್ದು, ವೆಂಕಟೇಶ್ ಅವರದ್ದು, ಕೇವಲ ಅತಿಥಿ ಪಾತ್ರ ಆಗಿರುವುದಿಲ್ಲ ಬದಲಿಗೆ ಪರಿಪೂರ್ಣ ಪಾತ್ರವೇ ಆಗಿರುತ್ತದೆ ಎನ್ನಲಾಗುತ್ತಿದೆ.
ವೆಂಕಟೇಶ್ ಅವರು ಸಿನಿಮಾಕ್ಕೆ ಎಂಟ್ರಿ ಕೊಡುತ್ತಿರುವ ಬಗ್ಗೆ ಚಿತ್ರತಂಡ ವಿಡಿಯೋ ಒಂದನ್ನು ಹಂಚಿಕೊಂಡಿದೆ. ವಿಡಿಯೋನಲ್ಲಿ ಚಿರಂಜೀವಿ, ‘ವೆಲ್ಕಮ್ ವೆಂಕಿ ಮೈ ಬ್ರದರ್’ ಎಂದರೆ, ವೆಂಕಟೇಶ್ ಅವರು, ‘ಚಿರು ಸರ್, ಮೈ ಬಾಸ್’ ಎಂದು ಆಲಿಂಗಿಸಿಕೊಂಡಿದ್ದಾರೆ. ಇಬ್ಬರು ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ವೆಂಕಟೇಶ್ ಅವರು ಈ ಹಿಂದೆ ಪವನ್ ಕಲ್ಯಾಣ್ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಹಿಂದಿಯ ‘ಓಎಂಜಿ’ ಸಿನಿಮಾದ ತೆಲುಗು ರೀಮೇಕ್ ‘ಗೋಪಾಲ-ಗೋಪಾಲ’ನಲ್ಲಿ ಪವನ್ ಕಲ್ಯಾಣ್ ದೇವರ ಪಾತ್ರದಲ್ಲಿ, ವೆಂಕಟೇಶ್, ದೇವರ ಮೇಲೆ ಕೇಸು ಹಾಕಿದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ಈಗ ವೆಂಕಟೇಶ್ ಅವರು ಚಿರಂಜೀವಿ ಜೊತೆಗೆ ನಟಿಸುತ್ತಿದ್ದಾರೆ. ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾನಲ್ಲಿ ನಯನತಾರಾ ನಾಯಕಿ ಆಗಿದ್ದು, ಸಿನಿಮಾ ಅನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಲಿದ್ದಾರೆ.




