ತುಮಕೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಹಳ್ಳಿಗಳ ತಾಯಂದಿರನ್ನು ದಾರಿ ತಪ್ಪಿಸುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ ಎಂದು ಗೃಹ ಸಚಿವ ಡಾ.ಪರಮೇಶ್ವರ ಹೇಳಿದರು.
ಎಚ್ಡಿಕೆ ಹೇಳಿಕೆಗೆ ತುಮಕೂರಿನಲ್ಲಿ ಇಂದು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಕೂಡ ಮುಖ್ಯಮಂತ್ರಿ ಆಗಿದ್ದವರು. ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಬೇಕಿದ್ದರೆ ಟೀಕಿಸಲಿ, ಸರಿಯಿಲ್ಲ ಎನ್ನಲಿ, ಆದರೆ ಪಂಚ ಗ್ಯಾರಂಟಿಗಳಿಂದ ಕಾಂಗ್ರೆಸ್ ಪಕ್ಷ ಹಳ್ಳಿಗಳ ತಾಯಂದಿರನ್ನು ದಾರಿ ತಪ್ಪಿಸುತ್ತಿದೆ ಎಂಬುದನ್ನು ಖಂಡಿಸುತ್ತೇವೆ. ಹಳ್ಳಿ ಭಾಷೆಯಲ್ಲಿ ಅದು ಕೆಟ್ಟ ಅರ್ಥ ಬರುತ್ತದೆ. ಹಾಗಾಗಿ ಎಚ್ಡಿಕೆ ಒಂದು ಸ್ಪಷ್ಟನೇ ಕೊಡಬೇಕು. ಇಲ್ಲದಿದರೇ ರಾಜ್ಯದ ತಾಯಂದಿರನ್ನು ಕ್ಷಮೆ ಕೇಳಬೇಕು. ಇಂತಹ ಆಕ್ಷೇಪಾರ್ಹ ಹೇಳಿಕೆ ಹಳ್ಳಿಗಳ ಕಡೆ ಸಾಕಷ್ಟು ಅರ್ಥ ಕೊಡುತ್ತದೆ. ನೀವು ನಮ್ಮ ಕಾರ್ಯಕ್ರಮ ವಿರೋಧ ಮಾಡುವಲ್ಲಿ ನಮಗೆ ಯಾವುದೇ ತಕರಾರು ಇಲ್ಲ.ಯೋಜನೆ ಸರಿಯಿಲ್ಲ ಅಂತಾ ಬೇಕಾದರೆ ಹೇಳಿ, ಅವಹೇಳನಕಾರಿಯಾದಂತಹ ಮಾತನ್ನು ಆಡಬಾರದು. ಯಾರು ಬಡತನ ರೇಖೆಗಿಂತ ಕಡಿಮೆ ಇದ್ದಾರೆ, ಅಂತಹ ಜನರಿಗೆ ಸಹಾಯವಾಗಲಿ ಎಂದು ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಯಾವ ಅರ್ಥದಲ್ಲಿ ಈಗೆ ಹೇಳಿದ್ದಾರೆ ಎಂದು ಎಚ್ಡಿಕೆ ವಿರುದ್ಧ ಹರಿಹಾಯ್ದರು.
ಬಿಜೆಪಿ ಭರವಸೆಗಳೆಲ್ಲ ಸುಳ್ಳು: ಪರಮೇಶ್ವರ ವ್ಯಂಗ್ಯ
ನಾವು ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದ ಬಿಜೆಪಿ ಈಗ ನಮ್ಮ ಗ್ಯಾರಂಟಿ ಯೋಜನೆಗಳನ್ನೇ ನಕಲು ಮಾಡಿ ಮೋದಿ ಗ್ಯಾರಂಟಿ ಎಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. 2014-19 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 15 ಲಕ್ಷ ರುಪಾಯಿ ಕೊಡುತ್ತೇವೆ ಎಂದು ಸುಳ್ಳು ಗ್ಯಾರಂಟಿ ನೀಡಿದ್ದರು. ಆಗ ನೀಡಿದ ಭರವಸೆಗಳೆಲ್ಲ ಹುಸಿಯಾಗಿದ್ದವು. ಅದೇ ಪರಿಯನ್ನು ಈ ಬಾರಿಯೂ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮುಂದುವರೆಸಿದ್ದಾರೆ ಎಂದು ಸಚಿವ ಡಾ.ಪರಮೇಶ್ವರ ಬಿಜೆಪಿ ಪ್ರಣಾಳಿಕೆ ಕುರಿತು ವ್ಯಂಗ್ಯವಾಡಿದರು.