ಪ್ರಧಾನಿ ನರೆಂದ್ರ ಮೋದಿ ಫ್ರಾನ್ಸ್ ಪ್ರವಾಸದ ಬಳಿಕ ಟ್ರಂಪ್ ಆಹ್ವಾನದ ಮೇರೆಗೆ ಗುರುವಾರ ಸಂಜೆ ಅಮೆರಿಕಕ್ಕೆ ಬಂದಿಳಿದಿದ್ದಾರೆ. ಡೋನಾಲ್ಡ್ ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾದ ಬಳಿಕ ಇದೆ ಮೊದಲ ಬಾರಿ ಅಮೆರಿಕಕ್ಕೆ ಬಂದ ಮೋದಿ ಜೊತೆ ಟ್ರಂಪ್ ಮಹತ್ವದ ಸಭೆ ನಡೆಸಿದರು.
ಮೋದಿ – ಟ್ರಂಪ್ ಭೇಟಿ; ಏನೆಲ್ಲಾ ಚರ್ಚೆ ಆಯ್ತು?
ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಿಗ್ಗೆ ಟ್ರಂಪ್ ಭೇಟಿಯಾದರು. ಉಭಯ ನಾಯಕರ ಚರ್ಚೆಯ ಬಳಿಕ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದಾರೆ. 2008 ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ಸಂಚುಕೋರ ತಹವ್ವೊರ್ ರಾಣಾನ ಭಾರತಕ್ಕೆ ಹಸ್ತಾಂತರಿಸುವ ಕುರಿತು ಟ್ರಂಪ್ ಹೇಳಿಕೆ ನೀಡಿದ್ದಾರೆ. 2008 ಮುಂಬೈ ದಾಳಿಯ ಭಯೋತ್ಪಾದಕ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡಲು ನಮ್ಮ ಸರ್ಕಾರ ಅನುಮೋದನೆ ನೀಡಿದೆ. ಈ ಸುದ್ದಿಯನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗ್ತಿದೆ ಅಂತ ಟ್ರಂಪ್ ಹೇಳಿದ್ದಾರೆ.
ತಹಾವ್ವೊರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಜನವರಿ 25, 2024ರಂದು ಅಮೆರಿಕ ಸುಪ್ರಿಂಕೋರ್ಟ್ ಆದೇಶ ನೀಡಿತ್ತು. ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿರುವ ರಾಣಾನನ್ನು 2009ರಲ್ಲಿ ಅಮೆರಿಕದ ಇಂಟಲಿಜೆನ್ಸ್ ಏಜನ್ಸಿ FBI ಬಂಧಿಸಿತ್ತು.
ಮುಂಬೈ ಭಯೋತ್ಪಾದಕ ದಾಳಿ. ಏನಾಗಿತ್ತು?
2008 ನವೆಂಬರ್ 26ರಂದು ಮುಂಬೈನಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಆರು ಅಮೆರಿಕದ ಪ್ರಜೆಗಳು ಸೇರಿದಂತೆ ಒಟ್ಟು 166 ಮಂದಿ ಜೀವ ಕಳೆದುಕೊಂಡಿದ್ದಾರೆ. 10 ಪಾಕಿಸ್ತಾನಿ ಭಯೋತ್ಪಾದಕರು ಮುಂಬೈನ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿ ನಡೆಸಿದ್ದರು.


