ಬೆಳಗಾವಿ : ಎತ್ತ ನೋಡಿದ್ರೂ ಸೀರೆಯುಟ್ಟು ಬುತ್ತಿ ಹೊತ್ಕೊಂಡು ಸಾಗುತ್ತಿರೋ ನಾರಿಮಣಿಯರು. ನೋಡಲು ಎರಡು ಕಣ್ಣು ಸಾಲದಂತಿರೋ ರೊಟ್ಟಿ ಬುತ್ತಿಯ ಜಾತ್ರೆ… ಯಾವುದೇ ಜಾತಿ ಭೇದವಿಲ್ಲದೇ ಮಠದಲ್ಲಿ ಅನಾವರಣಗೊಂಡ ಗ್ರಾಮೀಣ ಭಾರತದ ಸೊಗಡಿದು…ಇಷ್ಟಕ್ಕೂ ಇಂತಹ ಅತ್ಯದ್ಭುತ ಜಾತ್ರೆ ನಡೆದಿದ್ದಾದ್ರೂ ಎಲ್ಲಿ ಗೊತ್ತಾ?
ಬಣ್ಣ ಬಣ್ಣದ ಸೀರೆ, ಮಹಿಳೆಯರ ಭವ್ಯ ಮೆರವಣಿಗೆ. ಕಣ್ಣಾಯಿಸಿದಷ್ಟು ದೂರ ಜನಸಾಗರ… ಎಲ್ಲರ ತಲೆಯ ಮೇಲೊಂದು ಬಿಳಿ ಬಣ್ಣದ ಮೂಟೆ… ಇದರ ಜೊತೆ ಜೊತೆಗೆ ದೇವರ ನಾಮಸ್ಮರಣೆ…. ಅರ್ರೆ ಇದೆನಪ್ಪಾ, ಎಲ್ರು ತಲೆ ಮೇಲೆ ಮೂಟೆ ಇಟ್ಕೊಂಡು ಬರ್ತಿದ್ದಾರೆ….ಏನಿದು ಅಂತ ನೋಡುದ್ರೆ, ಇಂತಹ ವಿಭಿನ್ನ ಕಾರ್ಯಕ್ಕೆ ಸಾಕ್ಷಿ ಆಗಿದ್ದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿರುವ ಜಿಡಗಾ ಮಠ.
ಜಿಡಗಾ ಮಠ..ಬೆಳಗಾವಿ ಭಾಗದಲ್ಲಿ ಧಾರ್ಮಿಕತೆಗೆ ಹೇಳಿ ಮಾಡಿಸಿದ ಪುಣ್ಯ ಸ್ಥಳ… ಇಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ಯಲ್ಲಾಲಿಂಗ ಪ್ರಭುಗಳ ಜಾತ್ರೆ ನಡೆಯುತ್ತೆ…ಯಲ್ಲಾಲಿಂಗ ಮಹಾರಾಜರ 38ನೇ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ತಿರಂಗಾ ಬಣ್ಣವನ್ನು ಬಳಸಿ ಬುತ್ತಿ ಹೊತ್ತು ಬಂದಿದ್ರು ಭಕ್ತರು.. ಈ ದೃಶ್ಯವನ್ನ ನೋಡೋದೆ ಚೆಂದ… ಇನ್ನು ಜಾತ್ರೆಯಲ್ಲಿ ತ್ರಿವರ್ಣಧ್ವಜದ ಸಂಕೇತವನ್ನ ಬಳಸಿ ದೇಶ ಪ್ರೇಮದ ಜೊತೆ ಭಕ್ತಿಯನ್ನು ಮೆರೆದಿದ್ರು ಭಕ್ತರು
ಜಾತ್ರೆಯಲ್ಲಿ ದೇಶ ಪ್ರೇಮ ಮೆರೆದ ಭಕ್ತರದ್ದೇ ವಿಶೇಷ. ತಿರಂಗಾ ಬಣ್ಣವನ್ನು ಬಳಸಿ ಬುತ್ತಿ ಹೊತ್ತು ಸಾಗಿದ ಭಕ್ತರನ್ನ ನೋಡೋದೆ ಚೆಂದ. ತ್ರಿವರ್ಣದಲ್ಲಿ ರೊಟ್ಟಿ ಬುತ್ತಿ ಒಂದ್ಕಡೆ ಆಗಿದ್ರೆ, ಮತ್ತೊಂದ್ಕಡೆ ಗ್ರಾಮೀಣ ಸೊಗಡಿನ ಲೋಕವೇ ಸೃಷ್ಟಿಯಾಗಿತ್ತು. ಗುಡಿಸಲಿನಲ್ಲಿ ರೊಟ್ಟಿ ಮಾಡುವುದು. ಗೋಡಿಯನ್ನ ಕುಟ್ಟುವುದು. ಬಾವಿಯಿಂದ ನೀರು ಸೇದುವುದರ ಜೊತೆಗೆ ಹಳ್ಳಿ ಕಟ್ಟೆಯೂ ಸಿದ್ಧವಾಗಿತ್ತು.
ಜಾತ್ರೆ ಅಂದ್ರೆ ಕೇವಲ ದೇವರ ಆರಾಧನೆ ಮಾಡಿ ಪ್ರಸಾದ ಸೇವಿಸುವುದಲ್ಲ. ಬದ್ಲಿಗೆ ಪ್ರಸಾದವನ್ನ ತಾವೇ ತಂದು ಹಂಚಿ ತಿನ್ಬೇಕು ಎನ್ನುವುದೇ ಈ ಜಾತ್ರೆಯ ವಿಶೇಷವಾಗಿತ್ತು. ಒಟ್ನಲ್ಲಿ ಬೆಳಗಾವಿಯ ಜಿಡಗಾ ಮಠದಲ್ಲಿ ನಡೆದ ಈ ಜಾತ್ರೆ ಸಂಭ್ರಮ ಬಂದವರಿಗೆ ಮರೆಯಲಾರದ ಅನುಭವ ನೀಡಿದ್ದಂತೂ ಸುಳ್ಳಲ್ಲ.