ರಾಜ್ಯದ ಲಕ್ಷಾಂತರ ಸಾರಿಗೆ ನೌಕರರ ಪಾಲಿಗೆ ಇಂದು ಅತ್ಯಂತ ನಿರ್ಣಾಯಕ ದಿನವಾಗಿದ್ದು, ವರ್ಷಗಳಿಂದ ನಡೆಯುತ್ತಿರುವ ವೇತನ ಹೋರಾಟಕ್ಕೆ ಇಂದೇ ಅಂತ್ಯ ಬೀಳಲಿದೆಯೇ ಎಂಬ ಕುತೂಹಲ ಮೂಡಿದೆ. ಮಾರ್ಚ್ 2ರ ಅಂತಿಮ ಗಡುವು ಮುಗಿಯುತ್ತಿರುವ ಬೆನ್ನಲ್ಲೇ, ಸರ್ಕಾರದ ಸಂಧಾನ ಯಶಸ್ವಿಯಾಗುತ್ತಾ ಅಥವಾ ಚಕ್ರಬಂಧ ಮುಂದುವರಿಯುತ್ತಾ ಎಂಬುದು ಸಂಜೆ ವೇಳೆಗೆ ನಿರ್ಧಾರವಾಗಲಿದೆ.
ವೇತನ ಪರಿಷ್ಕರಣೆ ಮತ್ತು 38 ತಿಂಗಳ ಹಿಂಬಾಕಿ ನೀಡಬೇಕೆಂದು ಪಟ್ಟು ಹಿಡಿದಿರುವ ನೌಕರರ ಸಂಘಟನೆಗಳ ಜೊತೆ ಇಂದು ಸಂಜೆ 4 ಗಂಟೆಗೆ ಕೆಎಸ್‌ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಮಹತ್ವದ ಸಭೆ ಆಯೋಜಿಸಲಾಗಿದೆ. ಕೆಎಸ್‌ಆರ್ಟಿಸಿ ಎಂಡಿ ಅಕ್ರಂ ಪಾಷ ನೇತೃತ್ವದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ ನಾಲ್ಕೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಲಿದ್ದಾರೆ. 2024ರ ಜನವರಿಯಿಂದಲೇ ವೇತನ ಹೆಚ್ಚಳ ಜಾರಿಗೆ ಬರಬೇಕು ಎನ್ನುವುದು ನೌಕರರ ಪ್ರಬಲ ಬೇಡಿಕೆಯಾಗಿದ್ದರೆ, ಸರ್ಕಾರ ಮಾತ್ರ 2025ರಿಂದ ಜಾರಿ ಮತ್ತು ಕೇವಲ 26 ತಿಂಗಳ ಹಿಂಬಾಕಿಯ ಪ್ರಸ್ತಾವನೆ ಮುಂದಿಟ್ಟಿದೆ.
ಈ ಹಿಂದೆ ನೀಡಿದ್ದ ಮುಷ್ಕರದ ಎಚ್ಚರಿಕೆಯನ್ನು ಸರ್ಕಾರದ ಭರವಸೆಯ ಮೇರೆಗೆ ನೌಕರರು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದರು. ಆದರೆ, ಇಂದು ಬೇಡಿಕೆಗಳು ಈಡೇರದಿದ್ದರೆ ಮುಂದಿನ ಹೋರಾಟದ ಹಾದಿ ಮತ್ತಷ್ಟು ತೀವ್ರವಾಗುವ ಲಕ್ಷಣಗಳಿವೆ. ಸಾರಿಗೆ ನೌಕರರ ಸಂಘಟನೆಗಳು ಸರ್ಕಾರದ ಅರೆಬರೆ ಕೊಡುಗೆಗಳಿಗೆ ಒಪ್ಪುತ್ತಿಲ್ಲವಾದ್ದರಿಂದ, ಇಂದಿನ ಸಭೆಯಲ್ಲಿ ಅಕ್ರಂ ಪಾಷ ಅವರು ಯಾವ ರೀತಿಯ ‘ಮಾಸ್ಟರ್ ಪ್ಲಾನ್’ ಮುಂದಿಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಬಿಎಂಟಿಸಿ, ಕೆಎಸ್‌ಆರ್ಟಿಸಿ ಸೇರಿದಂತೆ ರಾಜ್ಯದ ಸಾರಿಗೆ ನಿಗಮಗಳ ಲಕ್ಷಾಂತರ ಸಿಬ್ಬಂದಿಯ ಕಣ್ಣು ಈಗ ಶಾಂತಿನಗರದ ಕೇಂದ್ರ ಕಚೇರಿಯತ್ತ ನೆಟ್ಟಿದೆ.


