ಸಿನಿಮಾ

ಬಾಲಿವುಡ್‌ನ ‘ಧುರಂಧರ್ 2’ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ‘ಟಾಕ್ಸಿಕ್’!’

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸಿನಿಮಾದ ಇತರೆ ರಾಜ್ಯಗಳ ಬಿಡುಗಡೆ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗುತ್ತಿದ್ದು, ಕೇವಲ ಟೀಸರ್ ಮೂಲಕವೇ ಸಿನಿಮಾ ಬಹುದೊಡ್ಡ ಹೈಪ್ ಸೃಷ್ಟಿಸಿದೆ.

‘ಟಾಕ್ಸಿಕ್’ ಬಿಡುಗಡೆ ಆಗುವ ದಿನವೇ ಹಿಂದಿಯ ‘ಧುರಂಧರ್ 2’ ಸಿನಿಮಾ ಕೂಡ ತೆರೆಗೆ ಬರುತ್ತಿದ್ದು, ಎರಡೂ ಚಿತ್ರಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಆದರೆ ಪ್ರಸ್ತುತ ‘ಟಾಕ್ಸಿಕ್’ ಸಿನಿಮಾ ಬಾಲಿವುಡ್‌ನ ‘ಧುರಂಧರ್ 2’ ಅನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.ಜನಪ್ರಿಯ ಮತ್ತು ವಿಶ್ವಾಸಾರ್ಹ ಸಿನಿಮಾ ಡೇಟಾಬೇಸ್ ಜಾಲತಾಣವಾದ ಐಎಂಬಿಡಿ ಬಿಡುಗಡೆ ಮಾಡಿರುವ 2026ರ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಯಶ್ ಅವರ ‘ಟಾಕ್ಸಿಕ್’ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ.

ಈ ಪಟ್ಟಿಯಲ್ಲಿ ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರವನ್ನು ‘ಟಾಕ್ಸಿಕ್’ ಎರಡನೇ ಸ್ಥಾನಕ್ಕೆ ತಳ್ಳಿದೆ. ವರದಿಗಳ ಪ್ರಕಾರ, ಐಎಂಡಿಬಿ ಬಳಕೆದಾರರ ಶೇ. 35 ರಷ್ಟು ಆಸಕ್ತಿಯೊಂದಿಗೆ ಯಶ್ ಸಿನಿಮಾ ಅಗ್ರಸ್ಥಾನದಲ್ಲಿದ್ದರೆ, ‘ಧುರಂಧರ್ 2’ ಶೇ. 26.6 ರಷ್ಟು ವೀಕ್ಷಕರ ಆಸಕ್ತಿಯೊಂದಿಗೆ ನಂತರದ ಸ್ಥಾನದಲ್ಲಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಆಕ್ಷನ್ ಚಿತ್ರದಲ್ಲಿ ಯಶ್ ಅವರ ಸ್ಟೈಲಿಶ್ ಲುಕ್ ಈಗಾಗಲೇ ವೈರಲ್ ಆಗಿದೆ. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಬೃಹತ್ ತಾರಾಗಣವಿದ್ದು, ಹಾಲಿವುಡ್‌ನ ಪ್ರಮುಖ ತಂತ್ರಜ್ಞರು ಕೂಡ ಕೆಲಸ ಮಾಡಿದ್ದಾರೆ. ಮಾರ್ಚ್ 19, 2026ರಂದು ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಅದೇ ದಿನ ‘ಧುರಂಧರ್ 2’ ಕೂಡ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಯಾರ ಅಬ್ಬರ ಜೋರಾಗಿರಲಿದೆ ಎಂಬುದು ಕುತೂಹಲ.

Comments (0)

Your email address will not be published. Required fields are marked *

Back to top button