Freedom TVಸಿನಿಮಾ

ಟಾಕ್ಸಿಕ್’ ರಿಲೀಸ್ ಡೇಟ್ ಮುಂದೂಡಿಕೆ; ಯುದ್ಧದ ಭೀತಿಗೆ ಮಣಿದ ಯಶ್ ಸಿನಿಮಾ!

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಭೀಕರ ಯುದ್ಧ ಸಂಘರ್ಷದ ಬಿಸಿ ಇದೀಗ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಗೂ ತಟ್ಟಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಕೊನೇ ಕ್ಷಣದಲ್ಲಿ ಶಾಕ್ ನೀಡಿದೆ. ಪೂರ್ವನಿರ್ಧರಿತ ವೇಳಾಪಟ್ಟಿಯಂತೆ ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆಯ ಹಿನ್ನೆಲೆಯಲ್ಲಿ ತನ್ನ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ.

ಸಿನಿಮಾದ ಬಿಡುಗಡೆ ದಿನಾಂಕ ಬದಲಾವಣೆಯ ಕುರಿತು ಚಿತ್ರತಂಡ ಸಾಮಾಜಿಕ ಮಾಧ್ಯಮಗಳಲ್ಲಿ ಅಧಿಕೃತ ಘೋಷಣೆ ಮಾಡಿದೆ. ಹೊಸ ನಿರ್ಧಾರದಂತೆ ‘ಟಾಕ್ಸಿಕ್’ ಸಿನಿಮಾ ಇದೇ ವರ್ಷ ಜೂನ್ 4ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರದ ವಿತರಣೆ ಮತ್ತು ಪ್ರದರ್ಶನದ ಮೇಲೆ ಯುದ್ಧದ ಪರಿಣಾಮ ಬೀರಬಹುದು ಎಂಬ ಮುನ್ನೆಚ್ಚರಿಕೆಯಿಂದ ಚಿತ್ರತಂಡ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಹಾಗೂ ಸ್ಯಾಂಡಲ್‌ವುಡ್ ಸುಂದರಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ನಟ ಯಶ್ ಅವರು ನಿರ್ಮಾಪಕರಾಗಿಯೂ ಹೊಸ ಜವಾಬ್ದಾರಿ ಹೊತ್ತಿದ್ದು, ಕೆವಿಎನ್ (ಪ್ರೊಡಕ್ಷನ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಭಾರತದ ವಿವಿಧ ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದ್ದು, ವಿಶ್ವಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವ ನಿರೀಕ್ಷೆಯಿದೆ.

Comments (0)

Your email address will not be published. Required fields are marked *

Back to top button