ಮಂಡ್ಯ: ಜಿಲ್ಲೆಯಲ್ಲಿ ಇತ್ತೀಚೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ಬಾಲ್ಯ ವಿವಾಹ ತಪ್ಪಿಸುವ ಉದ್ದೇಶದೊಂದಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೇ ಅಖಾಡಕ್ಕೆ ಧುಮುಕಿದೆ. ಬಾಲ್ಯ ವಿವಾಹ ನಡೆದ ಪ್ರಕರಣಗಳಲ್ಲಿ ಸ್ಥಳೀಯ ಪಿಡಿಓಗಳು, ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿಗಳು, ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಚೈಲ್ಡ್ ಲೈನ್ ಸಂಸ್ಥೆಗಳ ವಿರುದ್ಧವೇ ದೂರು ದಾಖಲು ಮಾಡಿಕೊಂಡಿದೆ.
ಮಂಡ್ಯ ತಾಲ್ಲೂಕು ಬಸರಾಳು ಹೋಬಳಿಯ ಬನಹಟ್ಟಿ ಗ್ರಾಮದ ನವೀನ್ ಎಂಬಾತ ಬಾಲಕಿಯನ್ನು ವಿವಾಹವಾಗಿದ್ದರೂ, ಆತನ ವಿರುದ್ಧ ಕ್ರಮ ಕೈಗೊಳ್ಳ ದ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲು ಮಾಡಲಾಗಿದೆ. ತುರುವೇಕೆರೆಯ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾಯಿದೆ 2005ರಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಬಸರಾಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬಸರಾಳು ಪೊಲೀಸ್ ಠಾಣೆ ಎಸ್ ಐ, ಚೈಲ್ಡ್ ಲೈನ್ ಸಂಸ್ಥೆಯ ಸುಜಾತ ಮತ್ತು ಮನುಕುಮಾರ್ ಗೆ ಆಯೋಗ ಸಮನ್ಸ್ ಜಾರಿ ಮಾಡಿದೆ.
ಆಯೋಗದ ಸಮನ್ಸ್ ಜಾರಿ ಆಗುತ್ತಿದ್ದಂತೆ ಇತ್ತ ಪಿಡಿಓ ಬಸರಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ದೂರಿನಂತೆ ನವೀನ್ ಎಂಬ ವರನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಬಾಲಕಿಯನ್ನು ಮದುವೆಯಾಗಿರುವ ನವೀನ್ ವಿರುದ್ದ ಪೋಸ್ಕೋ, ಬಾಲ್ಯ ವಿವಾಹ ನಿಷೇದ ಕಾಯ್ದೆ ಮತ್ತು ಐಪಿಸಿ ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ.