ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ಸ್ವೀಕರಿಸದೆ ತಳ್ಳಿದ ಘಟನೆ ಈಗ ರಾಜ್ಯ ರಾಜಕಾರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ನಟ ಜಗ್ಗೇಶ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ನಡೆಯನ್ನು ಟೀಕಿಸಿದ್ದಾರೆ.
“ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರ ಆದ ಇತಿಹಾಸವಿಲ್ಲ! ರಾಯರ ಸಣ್ಣ ಕೃಪೆ ನಮ್ಮಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪ-ತಪ, ಉಪವಾಸದಿಂದ ಸೇವೆ ಮಾಡುತ್ತಾರೆ. ಭಕ್ತಿಯಿಂದ ಬಂದದ್ದನ್ನು ಹೀಗೆ ತಿರಸ್ಕರಿಸಿದ ಪ್ರಥಮ ವ್ಯಕ್ತಿಯನ್ನು ನಾನು ನನ್ನ ಬದುಕಿನಲ್ಲಿ ಕಂಡಿದ್ದು. ರಾಯರಿದ್ದಾರೆ.. ಎದ್ದು ಬರುತ್ತಾರೆ.. ಕಾಯಬೇಕು,” ಎಂದು ಬರೆದುಕೊಂಡಿದ್ದಾರೆ.
ಬೆಳಗಾವಿ ಪ್ರವಾಸಕ್ಕೆ ತೆರಳುವ ಮುನ್ನ ಬೆಂಗಳೂರಿನ ತಮ್ಮ ಕಾವೇರಿ ನಿವಾಸದ ಬಳಿ ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಿಸುತ್ತಿದ್ದ ಮುಖ್ಯಮಂತ್ರಿಗಳ ಬಳಿ ಅಭಿಮಾನಿಯೊಬ್ಬರು ಮಂತ್ರಾಲಯ ರಾಯರ ಭಾವಚಿತ್ರವನ್ನು ನೀಡಲು ಮುಂದಾಗಿದ್ದರು. ಆದರೆ ಸಿಎಂ ಆ ಫೋಟೋವನ್ನು ಸ್ವೀಕರಿಸದೆ ಕೈಯಿಂದ ಪಕ್ಕಕ್ಕೆ ತಳ್ಳಿದ್ದಲ್ಲದೆ, ಆ ಅಭಿಮಾನಿಯ ಮೇಲೆ ಗರಂ ಆಗಿದ್ದರು. ಈ ದೃಶ್ಯಗಳ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಕ್ರೋಶ ವ್ಯಕ್ತವಾಗಿದೆ.


