ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಕುರ್ಚಿ ಅಲ್ಲಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು
ದೊಡ್ಡ ಮಟ್ಟದ ಹಣ ಬಿಹಾರ ಎಲೆಕ್ಷನ್ ಗೆ ಕೊಟ್ಟು ಕುರ್ಚಿ ಉಳಿಸುವ ಯತ್ನ ನಡೆಯುತ್ತಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪ ಮಾಡಿದ್ದಾರೆ.. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.15ರ ನಂತರ ಕ್ರಾಂತಿಯ ಬಗ್ಗೆ ಕಾದು ನೋಡಬೇಕಿದೆ. ಬಿಹಾರ ಎಲೆಕ್ಷನ್ ಘೋಷಣೆಯಾಗಿರುವ ಕಾರಣ ಸಚಿವರ ಜೊತೆ ಕಲೆಕ್ಷನ್ ಮಾಡುತ್ತಿದ್ದಾರೆ.
ಬಿಹಾರ ಎಲೆಕ್ಷನ್ ಹಿನ್ನೆಲೆಯಲ್ಲಿ ಔತಣಕೂಟ ಕರೆದು 300 ಕೋಟಿ ವಸೂಲಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಯಾವುದೇ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲ. 2028ರವರೆಗೆ ತಾನೇ ಸಿಎಂ ಆಗಬೇಕು ಎಂಬ ಉದ್ದೇಶದಿಂದ ಹಣ ವಸೂಲಿ ನಡೆದಿದೆ. ಕೇರಳ, ಚಂಡೀಗಢ, ತಮಿಳುನಾಡಿನ ಎಲೆಕ್ಷನ್ ಗುರಿಯಿದೆ. ಮುಂಬರುವ ಎಲೆಕ್ಷನ್ ಗಳಿಗೆ ಕರ್ನಾಟಕ ಎಟಿಎಂ ಆಗಿದೆ. ಇಲ್ಲಿಂದ ವಸೂಲಿ ಮಾಡಿ ಬಂಡವಾಳ ಹಾಕಿ ಸಿಎಂ ಕುರ್ಚಿ ಉಳಿಸಲು ಯತ್ನಿಸುತ್ತಿದ್ದಾರೆ ಎಂದರು.
ಐದು ವರ್ಷ ಸಿಎಂ ಆಗುವ ಕನಸು ಸಿದ್ದರಾಮಯ್ಯ ಕಾಣುತ್ತಿದ್ದಾರೆ. ನವೆಂಬರ್ 20ಕ್ಕೆ ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿದ್ದಾರೆ. ರಾಹುಲ್ ಗಾಂಧಿ ಬಂದಾಗ ಶಾಸಕರ ಅಭಿಪ್ರಾಯ ಪಡೆಯುವ ಸಾಧ್ಯತೆಯಿದೆ. ನ.15ರ ಬಳಿಕ ರಾಜ್ಯದಲ್ಲಿ ದೊಡ್ಡ ಕ್ರಾಂತಿಯಾಗುತ್ತದೆ. 50:50 ಅನುಪಾತದಲ್ಲಿ ಸಿಎಂ ಹುದ್ದೆ ಕುರಿತು ಅಭಿಪ್ರಾಯ ಇದೆ. ರಾಹುಲ್ ಗಾಂಧಿ ಬಂದು ಹೋದ ನಂತರ ಸ್ಪಷ್ಟ ಸಂದೇಶ ಸಿಗುತ್ತದೆ. ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದೆ. ಸಿಎಂ ಹುದ್ದೆಗೆ ಸೂಟ್ ಕೇಸ್ ರಾಜ್ಯದಲ್ಲಿ ರೆಡಿಯಿದೆ. ಸಿಎಂ ಹುದ್ದೆ ಹರಾಜಿನಲ್ಲಿ ಖರೀದಿ ಮಾಡಲು ಸಿದ್ದರಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಸಾಧನೆ ಶೂನ್ಯ. ಬಿಜೆಪಿ ಪಕ್ಷ ಅಧಿಕಾರವಿದ್ದಾಗ ಚಿತ್ರದುರ್ಗ ಎಷ್ಟೋ ಅಭಿವೃದ್ಧಿಯಾಗಿತ್ತು. ಒಂದು ಕಡೆ ಸಿದ್ದರಾಮಯ್ಯ -ಬಣ, ಡಿಕೆಶಿ ಬಣ ರಾಜ್ಯದಲ್ಲಿದೆ. ಅಪ್ಪ- ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತಾಗಿದೆ. ಡಿಕೆ ಶಿವಕುಮಾರ್ ಅವರು ಬೇರೆಯವರು -ಮಾತನಾಡಿದರೆ ನೋಟಿಸ್ ಕೊಡುತ್ತಾರೆ. ಯತೀಂದ್ರ ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ? ಬಹುಶಃ ಡಿಕೆ ಶಿವಕುಮಾರ್ ಅವರಿಗೆ ಅಷ್ಟು ಧೈರ್ಯವಿಲ್ಲ ಅನ್ನಿಸುತ್ತದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಹೆಚ್ಚಿದೆ. ಮಧ್ಯಂತರ ಚುನಾವಣೆಗೆ ನಾವು ರೆಡಿಯಿದ್ದೇವೆ ಎಂದರು.


