ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದ ಹಳ್ಳಿಗಳ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಒಂದೊಂದಾಗಿ ಹೊರ ಬರುತ್ತಿವೆ. ಇದೀಗ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಬೀಡು ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ಅನಾರೋಗ್ಯ ಪೀಡಿತ ವಯೋ ವೃದ್ದೆಯನ್ನು ಚಿಕಿತ್ಸೆಗಾಗಿ ಹಳ್ಳಕೊಳ್ಳ ತೂಗು ಸೇತುವೆಯನ್ನೆಲ್ಲ ದಾಟಿ ಮೂರು ಕಿಲೋಮೀಟರ್ ದೂರದ ಮುಖ್ಯರಸ್ತೆವರೆಗೆ ಗ್ರಾಮಸ್ಥರು ಎತ್ತಿಕೊಂಡು ಬಂದಿದ್ದಾರೆ. ನೆಲ್ಲಿಬೀಡು ಗ್ರಾಮ ಸೇರಿದಂತೆ ಅಜ್ಜಿಗದ್ದೆ, ಆರೋಳ್ಳಿ, ಕಟ್ಟಿಮನೆ ಕೋಣೆಮನೆ ಗ್ರಾಮಗಳಿಗೆ ತೂಗು ಸೇತುವೆಯೇ ಆಧಾರ ಬೇಸಿಗೆಯಲ್ಲಿ ಭದ್ರಾ ಒಡಲಲ್ಲಿ ನೀರು ಕಮ್ಮಿಯಾಗುವುದರಿಂದ ವಾಹನಗಳು ಓಡಾಡುತ್ತವೆ. ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದರಿಂದ ವಾಹನ ಓಡಾಟಕ್ಕೆ ಅವಕಾಶವಿಲ್ಲ. ಕಳೆದ ಏಳು ದಶಕಗಳಿಂದ ಸೇತುವೆ ನಿರ್ಮಿಸಿ ಕೊಡಿ ಎಂದು ಮನವಿ ಮಾಡಿದ್ರು ಯಾರು, ಕ್ಯಾರೆ ಎನ್ನುತ್ತಿಲ್ವಂತೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.


