ಬೆಂಗಳೂರು: ಕೇರಳದಲ್ಲಿ ಕೇರಳ ಕುರಿ, ಕೋಳಿ, ಮೇಕೆ, ಎಮ್ಮೆ ಬಲಿಯ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಇನ್ನೊಂದು ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇವರು ಪ್ರತಿಯೊಂದಕ್ಕೂ ಎಸ್ ಐಟಿ ರಚನೆ ಮಾಡಿ ತನಿಖೆ ಮಾಡಿಸುತ್ತಾರೆ, ಅಲ್ಲವೇ? ಬಲಿ ವಿಷಯಕ್ಕೂ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಇದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ನೀಡಿಕೆ ಅಲ್ಲವೇ? ನಾನು ಮಾಧ್ಯಮಗಳ ಮೂಲಕವೇ ಗಮನಿಸಿದೆ. ಸಿಎಂ ಮತ್ತು ನನ್ನ ವಿರುದ್ಧ ಮಾಡಿಸುತ್ತಿರುವ ಶತ್ರು ಭೈರವಿ ಯಾಗ ಎಂದು ಹೇಳಿದ್ದಾರೆ. ಸಿಎಂ, ಡಿಸಿಎಂ ವಿರುದ್ಧ ವಾಮಾಚಾರ ಎಂದರೆ ಸಾಮಾನ್ಯವೇ? ಹಾಗಾಗಿ ಅದರ ತನಿಖೆಗೂ ಒಂದು ಎಸ್ಐಟಿ ರಚನೆ ಮಾಡಲಿ ಎಂದು ಅವರು ಹೇಳಿದರು.
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು
ಡಿಸಿಎಂ ಅವರು ಹೇಳಿದ್ದಾರೆ. ಇದು ಮಾಟ ಮಂತ್ರ ಎಂದು ಕಥೆ ಕಟ್ಟಿದ್ದಾರೆ. ಅವರ ಅಷ್ಟೂ ಹೇಳಿಕೆಯನ್ನು ಗಮನಿಸಿದ್ದೇನೆ. ಒಂದು ಮಾತನ್ನು ಹೇಳಲು ಬಯಸುತ್ತೇನೆ. ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು.’ ಎಂದು. ದಾಸಶ್ರೇಷ್ಠ ಪುರಂದರದಾಸರು ರಚಿಸಿರುವ ಪದವಿದು. ಅವರು ಹೇಳಿಕೆ ಕೊಡುವ ಮುನ್ನ ತಾವು ಅಲಂಕರಿಸಿರುವ ಹುದ್ದೆಯ ಘನತೆ ಅರಿಯಬೇಕಿತ್ತು. ಅವರಿಗೆ ಆ ಸ್ಥಾನದ ಮೌಲ್ಯ ಇನ್ನೂ ಅರ್ಥವಾಗಿಲ್ಲ ಎಂದು ಅವರು ಟೀಕಿಸಿದರು.