‘ಮ್ಯಾಕ್ಸ್’ ಸಿನಿಮಾದಲ್ಲಿ ಕಳ್ಳ-ಪೊಲೀಸ್ ಕಥೆ ಇದೆ. ಸಾಮಾನ್ಯವಾಗಿ ಇಂಥ ಕಥೆಯಲ್ಲಿ ಪೊಲೀಸರು ಕಳ್ಳರನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಆದರೆ ಮ್ಯಾಕ್ಸ್ ಸಿನಿಮಾ ಕಥೆ ಡಿಫರೆಂಟ್ ಆಗಿದೆ. ಈ ಚಿತ್ರದಲ್ಲಿ ಕಳ್ಳರೇ ಪೊಲೀಸರನ್ನು ಹಿಡಿಯಲು ಬರುತ್ತಾರೆ! ಇಲ್ಲಿ ಕಿಚ್ಚ ಸುದೀಪ್ ಅವರು ಖಡಕ್ ಪೊಲೀಸ್ ಆಫೀಸರ್ ಪಾತ್ರವನ್ನು ಮಾಡಿದ್ದಾರೆ. ಅವರ ಜೊತೆ ಉಗ್ರಂ ಮಂಜು, ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು ಮುಂತಾದವರು ಕೂಡ ಪೊಲೀಸ್ ಪಾತ್ರವನ್ನು ನಿಭಾಯಿಸಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ‘ಮ್ಯಾಕ್ಸ್’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಮ್ಯಾಕ್ಸ್ ಕಥೆ ಸರಳವಾಗಿದೆ. ರಾಜಕಾರಣಿಗಳ ಮಕ್ಕಳು ಪೊಲೀಸರ ಮೇಲೆ ಕೈ ಮಾಡುತ್ತಾರೆ. ಅಂಥವರಿಗೆ ಬುದ್ಧಿ ಕಲಿಸಲು ಮ್ಯಾಕ್ಸ್ ಅಲಿಯಾಸ್ ಅರ್ಜುನ್ ಮಹಾಕ್ಷಯ್ (ಸುದೀಪ್) ಬರುತ್ತಾನೆ. ಬಂಧನಕ್ಕೆ ಒಳಗಾದ ಬಳಿಕ ರಾಜಕಾರಣಿಗಳ ಮಕ್ಕಳು ಅನುಮಾನಾಸ್ಪದವಾಗಿ ಸಾಯುತ್ತಾರೆ. ಆಗ ಇಡೀ ಪೊಲೀಸ್ ಸ್ಟೇಷನ್ಗೆ ಸಂಕಷ್ಟ ಶುರುವಾಗುತ್ತದೆ. ಸೇಡು ತೀರಿಸಿಕೊಳ್ಳಲು ವಿಲನ್ಗಳ ದಂಡು ಬರುತ್ತದೆ. ಅವರಿಂದ ತಪ್ಪಿಸಿಕೊಂಡು, ತಮ್ಮವರನ್ನು ಕಾಪಾಡಿಕೊಳ್ಳಲು ಮ್ಯಾಕ್ಸ್ ಹೇಗೆಲ್ಲ ಕಷ್ಟಪಡುತ್ತಾನೆ ಎಂಬುದೇ ಈ ಚಿತ್ರದ ಕಥಾ ಸಾರಾಂಶ.

ಮೇಲ್ನೋಟಕ್ಕೆ ನೋಡಲು ‘ಮ್ಯಾಕ್ಸ್’ ಕಥೆ ಸರಳವಾಗಿದೆ ಎನಿಸದರೂ ಅದನ್ನು ತೆರೆಗೆ ತರುವಲ್ಲಿ ನಿರ್ದೇಶಕರು ಸಾಕಷ್ಟು ಶ್ರಮಪಟ್ಟಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಥ್ರಿಲ್ಲಿಂಗ್ ಗುಣವನ್ನು ಪ್ರತಿ ದೃಶ್ಯದಲ್ಲೂ ಬರೆಸಿದ್ದಾರೆ. ಒಂದಷ್ಟು ಟ್ವಿಸ್ಟ್ಗಳ ಮೂಲಕ ಮನರಂಜನೆಯನ್ನು ಹೆಚ್ಚಿಸಿದ್ದಾರೆ. ಮುಂದೇನಾಗುತ್ತದೆ ಎಂಬ ಕೌತುಕವನ್ನು ಕೊನೇ ತನಕ ಕಾಪಾಡಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಪ್ರೇಕ್ಷಕರನ್ನು ‘ಮ್ಯಾಕ್ಸ್’ ಸಿನಿಮಾ ಆವರಿಸುತ್ತದೆ.
ರಾತ್ರಿ ಶುರುವಾದ ಒಂದು ಕಿರಿಕ್ ಮರುದಿನ ಬೆಳಕು ಹರಿಯುವುದರೊಳಗೆ ಅಂತ್ಯವಾಗುತ್ತದೆ. ಕೆಲವೇ ಗಂಟೆಗಳ ಒಳಗೆ ಒಂದು ದೊಡ್ಡ ಯುದ್ಧವೇ ನಡೆಯುತ್ತದೆ. ಹಾಗಂತ ಇದು ಬರೀ ಹೊಡಿಬಡಿ ದೃಶ್ಯಗಳೇ ತುಂಬಿರುವ ಸಿನಿಮಾ ಅಲ್ಲ. ಆ್ಯಕ್ಷನ್ ಸೀನ್ಗಳ ಜೊತೆಗೆ ಬುದ್ಧಿಯ ಆಟ ಕೂಡ ಹೌದು. ಭುಜಬಲದ ಜೊತೆಗೆ ಬುದ್ಧಿಬಲವನ್ನೂ ಮ್ಯಾಕ್ಸ್ ಉಪಯೋಗಿಸುತ್ತಾನೆ. ಸುದೀಪ್ ಅವರ ವೃತ್ತಿಜೀವನದಲ್ಲಿಒಂದು ಡಿಫರೆಂಟ್ ಚಿತ್ರವಾಗಿ ‘ಮ್ಯಾಕ್ಸ್’ ಮೂಡಿಬಂದಿದೆ.
‘ಮ್ಯಾಕ್ಸ್’ ಸಿನಿಮಾದಲ್ಲಿ ಹೀರೋ ಪಾತ್ರಕ್ಕೆ ಹೆಚ್ಚಿನ ಕಟ್ಟುಪಾಡುಗಳು ಇಲ್ಲ. ಲವ್, ರೊಮ್ಯಾನ್ಸ್, ಕಾಮಿಡಿ ಇತ್ಯಾದಿ ವಿಷಯಗಳಲ್ಲಿ ಹೀರೋ ಕಾಲ ಹರಣ ಮಾಡುವುದೇ ಇಲ್ಲ. ಚಿತ್ರದ ಆರಂಭದಿಂದಲೇ ನೇರವಾಗಿ ಕಥೆ ತೆರೆದುಕೊಳ್ಳುತ್ತದೆ. ಯಾವುದೇ ಅನಗತ್ಯ ಅಂಶಗಳಿಗೂ ಕಥೆಯಲ್ಲಿ ಜಾಗವಿಲ್ಲ. ಒಮ್ಮೆ ಶುರುವಾದ ಕಥೆ ಕೊನೆವರೆಗೂ ವೇಗವಾಗಿಯೇ ಸಾಗುತ್ತದೆ. ಇದು ಈ ಸಿನಿಮಾದ ಮುಖ್ಯವಾದ ಪ್ಲಸ್ ಪಾಯಿಂಟ್. 2 ಗಂಟೆ 13 ನಿಮಿಷದಲ್ಲಿ ‘ಮ್ಯಾಕ್ಸ್’ ಮಸ್ತ್ ಮನರಂಜನೆ ನೀಡುತ್ತದೆ.


