ಮನರಂಜನೆಸಿನಿಮಾ

ಕಾಟೇರದಲ್ಲೂ ಅಸ್ಥಿ ಪಂಜರ ರಾಜ್ಯದಲ್ಲೂ ಅಸ್ಥಿ ಪಂಜರದ ಸದ್ದು!

ಬೆಂಗಳೂರು : ನಿಥಾರಿ ಹತ್ಯಾಕಾಂಡ ನಿಮಗೆ ನೆನಪಿದೆಯಾ..? ನೋಯ್ಡಾದ ಸೆಕ್ಟರಿನ ಚರಂಡಿಯೊಳಗೆ ಸಿಕ್ಕಿದ್ದು ರಾಶಿ ರಾಶಿ ಮಕ್ಕಳ ತಲೆ ಬುರುಡೆ ಮತ್ತು ಮೂಳೆಗಳು. ಆ ಕೇಸು ಬೆನ್ನತ್ತಿದ ಪೊಲೀಸ್ರು ಮಣೀಂದರ್ ಸಿಂಗ್ ಪಂಧೇರ್ ಹಾಗೂ ಸುರೇಂದ್ರ ಕೋಲಿ ಎಂಬುವವರನ್ನ ಬಂಧಿಸಿದ್ರು. ಇದಾದ ಬಳಿಕ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ನೆಲದಲ್ಲಿ 600ಕ್ಕೂ ಹೆಚ್ಚು ತಲೆ ಬುರುಡೆಗಳು ಗೋಚರಿಸಿದ್ವು. ಸಾಕಷ್ಟು ಸಂಶೋಧನೆ ಬಳಿಕ ತಲೆಬುರುಡೆಗಳು ದೊರಕಿದ ಸ್ಥಳದಲ್ಲಿ ಸಮಾಧಿ ಇತ್ತು ಅಂತ ವಿಜ್ಞಾನಿಗಳು ಅಭಿಪ್ರಾಯ ಪಟ್ಟರು.

1970ರ ಆಸುಪಾಸಿನಲ್ಲಿ ಇದೇ ರೀತಿ ಅಸ್ಥಿ ಪಂಜರಗಳು ದೊರಕಿದ್ವು ಅನ್ನೋ ಸಣ್ಣದೊಂದು ಎಳೆ ಇಟ್ಕೊಂಡು ಕಾಟೇರಾ ಸಿನಿಮಾದ ಕಥೆ ಎಣೆಯಲಾಗಿದೆ. ಹೌದು ಕಾಟೇರಾ ಸಿನಿಮಾದ ಆರಂಭದಲ್ಲೂ 107 ಜನರ ಅಸ್ಥಿ ಪಂಜರ ಸಿಗುತ್ತೆ… ಪೊಲೀಸರು ಅದರ ತನಿಖೆಗೆ ಇಳಿದಾಗ 15 ವರ್ಷಗಳ ಹಿಂದಿನ ಕಹಾನಿ ತೆರೆದುಕೊಳ್ಳುತ್ತದೆ. ಆ 107 ಜನರ ಸಾವಿಗೆ ಕಾರಣ ಆದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಫ್ಲ್ಯಾಶ್ಬ್ಯಾಕ್ನಲ್ಲಿ ಉತ್ತರ ಸಿಗುತ್ತದೆ.

ಈ ಸಿನಿಮಾ ಬಿಡುಗಡೆಗೆ ಒಂದು ದಿನ ಬಾಕಿ ಇದ್ದಾಗಲೇ ಚಿತ್ರದುರ್ಗದ ಪಾಳು ಮನೆಯಲ್ಲಿ ಪಿಡಬ್ಲ್ಯೂಡಿ ಇಂಜಿನಿಯರ್ ಕುಟುಂಬದ ಅಸ್ಥಿ ಪಂಜರಗಳು ಗೋಚರಿಸಿದ್ವು. ಆ ಮನೆಯ ಕ್ಯಾಲೆಂಡರ್ 2019ರ ಜನವರಿಗೆ ನಿಂತು ಹೋಗಿದೆ. ಈ ವೇಳೆಯಲ್ಲೇ ಆ ಮನೆಯಲ್ಲಿದ್ದ ಐದು ಜೀವಗಳು ಉಸಿರು ನಿಲ್ಲಿಸಿರಬಹುದು ಎಂದು ಅಂದಾಜಿಸಲಾಗಿದೆ. ಹೌದು ಮನೆಯ ಯಜಮಾನ ಜಗನ್ನಾಥ್ ರೆಡ್ಡಿ, ಆತನ ಪತ್ನಿ ಪ್ರೇಮ, ಹಾಗೂ ಓರ್ವ ಹೆಣ್ಣು ಮಗಳು, ಮತ್ತಿಬ್ಬರು ಗಂಡು ಮಕ್ಕಳ ಅಸ್ಥಿ ಪಂಜರ ಪತ್ತೆಯಾಗಿವೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಎಫ್ ಎಸ್ ಎಲ್ ವರದಿ ಬಂದ ಬಳಿಕವಷ್ಟೆ ಇದು ಆತ್ಮಹತ್ಯೆಯೋ ಕೊಲೆಯೋ ಅನ್ನೋದು ಗೊತ್ತಾಗುತ್ತದೆ. ಅಲ್ಲಿಯವರೆಗೂ ಎಲ್ಲವೂ ಅನುಮಾನಗಳಷ್ಟೆ.

ಚಿತ್ರದುರ್ಗದ ಜೈಲ್ ರಸ್ತೆಯ ಮನೆಯಲ್ಲಿ ಅಸ್ಥಿ ಪಂಜರದ ತನಿಖೆ ನಡೆಯುತ್ತಿರುವಾಗಲೇ ತುಮಕೂರು ಜಿಲ್ಲೆಯ ಕುಣಿಗಲ್ ನ ಕಿತ್ತಾನಮಂಗಲ ಕರೆಯಲ್ಲಿ ಅಸ್ಥಿ ಪಂಜರವೊಂದು ಪತ್ತೆಯಾಯ್ತು. ಅಸ್ಥಿ ಪಂಜರದ ಬಳಿ ಪತ್ತೆಯಾಗಿರುವ ಕಾಲು ಚೈನ್, ನೈಟಿ ಹಾಗೂ ಬಳೆಗಳನ್ನ ಗಮನಿಸಿ ಇದು ಮಹಿಳೆಯ ಕಳೆಬರ ಅಂತ ಪತ್ತೆ ಹಚ್ಚಿರೋದಲ್ಲದೆ, ಇದು ರಂಜಿತಾ ಎಂಬ ಹೆಣ್ಣು ಮಗಳ ಅಸ್ಥಿ ಪಂಜರ ಅಂತಲೂ ಪತ್ತೆ ಹಚ್ಚಲಾಗಿದೆ. ಕಳೆದ ಆರು ತಿಂಗಳ ಹಿಂದೆ ಕಲ್ಲಿಪಾಳ್ಯ ಗ್ರಾಮದಿಂದ ಆಕೆ ನಾಪತ್ತೆಯಾಗಿದ್ದ ಬಗ್ಗೆ ಪೊಲೀಸ್ರು ಮಾಹಿತಿ ನೀಡಿದ್ದಾರೆ. ಇನ್ನು ಇದೀಗ ಅಸ್ಥಿ ಪಂಜರವನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ವರದಿ ಬಂದ ಬಳಿಕವಷ್ಟೆ ಸಾವಿನ ಹಿಂದಿರುವ ಸತ್ಯ ಬಯಲಾಗಲಿದೆ.

ಒಟ್ನಲ್ಲಿ ಇದೀಗ ರಾಜ್ಯದಲ್ಲಿ ಅಸ್ಥಿಪಂಜರದ್ದೇ ಸದ್ದು, ಒಂದು ಕಡೆ ಕಾಟೇರಾ ಸಿನಿಮಾದಲ್ಲೂ ಅಸ್ಥಿ ಪಂಜರ, ಚಿತ್ರದುರ್ಗ, ತುಮಕೂರಿನಲ್ಲೂ ಅಸ್ಥಿ ಪಂಜರದ್ದೇ ಸುದ್ದಿ.. ಸಿನಿಮಾದಲ್ಲಿ ಅಸ್ಥಿ ಪಂಜರ ಯಾರದ್ದೂ ಅನ್ನೋದಿಕ್ಕೆ ಉತ್ತರ ಸಿಕ್ಕಿಬಿಡುತ್ತದೆ. ಆದ್ರೆ ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಸಿಕ್ಕಿರುವ ಅಸ್ಥಿ ಪಂಜರದ ಸತ್ಯ ಬಯಲಾಗಬೇಕು ಅಂದ್ರೆ ಪೂರ್ಣ ತನಿಖೆ ಮುಗಿಯಬೇಕು..ಅಲ್ಲಿಯವರೆಗೂ ಕಾಯಲೇಬೇಕು.

Comments (0)

Your email address will not be published. Required fields are marked *

Back to top button