ಲೈಫ್ ಸ್ಟೈಲ್ವೆಬ್ ಸ್ಟೋರೀಸ್ಸುದ್ದಿ

‘ಬದುಕಿನ ಭದ್ರ ಬುನಾದಿ ಉಕ್ಕಿನಿಂದಲ್ಲ, ಮಹಿಳೆಯರಿಂದ’


ಅಹ್ಮದಾಬಾದ್: ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಭಾರತದ ಖ್ಯಾತ ಉದ್ಯಮಿ ಹಾಗೂ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, ತಮ್ಮ ಜೀವನದ ಮೇಲೆ ಗಾಢ ಪ್ರಭಾವ ಬೀರಿದ ಮಹಿಳೆಯರನ್ನು ಸ್ಮರಿಸುವ ಮೂಲಕ ಗಮನ ಸೆಳೆದಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ಸುದೀರ್ಘ ಹಾಗೂ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅವರು, ತಮ್ಮ ಯಶಸ್ಸಿನ ಹಿಂದಿರುವ ಮಹಿಳಾ ಶಕ್ತಿಯನ್ನು ಗೌರವಿಸಿದ್ದಾರೆ.


ಗೌತಮ್ ಅದಾನಿ ತಮ್ಮ ತಾಯಿಯ ಬಗ್ಗೆ ಅತೀವ ಗೌರವ ವ್ಯಕ್ತಪಡಿಸಿದ್ದಾರೆ. “ನನ್ನ ತಾಯಿ ಹೇಳುತ್ತಿದ್ದ ಪುರಾಣ ಕಥೆಗಳು ಪಠ್ಯಪುಸ್ತಕಗಳಿಗಿಂತ ಹೆಚ್ಚಿನ ಮೌಲ್ಯಗಳನ್ನು ಕಲಿಸಿದವು. ಧೈರ್ಯ, ತ್ಯಾಗ ಮತ್ತು ನಂಬಿಕೆಯ ಬೀಜಗಳನ್ನು ಅವರೇ ಬಿತ್ತಿದ್ದು,” ಎಂದು ನೆನಪಿಸಿಕೊಂಡಿದ್ದಾರೆ. ಕೇವಲ 16ನೇ ವಯಸ್ಸಿನಲ್ಲಿ ಉದ್ಯಮದ ಕನಸು ಹೊತ್ತು ಮುಂಬೈಗೆ ಹೊರಟಾಗ, ಅಸ್ಪಷ್ಟ ಭವಿಷ್ಯದ ನಡುವೆಯೂ ಮಗನನ್ನು ಕಳುಹಿಸಿಕೊಟ್ಟ ತಾಯಿಯ ಧೈರ್ಯವೇ ನನ್ನ ಶಕ್ತಿ ಎಂದು ಅವರು ಬಣ್ಣಿಸಿದ್ದಾರೆ.

ಸೇವೆಯ ಹಾದಿಯಲ್ಲಿ ಪತ್ನಿ ಪ್ರೀತಿ ಅದಾನಿ
ತಮ್ಮ ಪತ್ನಿ ಪ್ರೀತಿ ಅದಾನಿ ಅವರನ್ನು ‘ಆತ್ಮಸಾಕ್ಷಿಯ ಪಾಲಕಿ’ ಎಂದು ಕರೆದಿರುವ ಅದಾನಿ, ದಂತವೈದ್ಯೆಯಾಗಿರುವ ಅವರು ‘ಅದಾನಿ ಫೌಂಡೇಶನ್’ ಮೂಲಕ 22 ರಾಜ್ಯಗಳಲ್ಲಿ ಕೋಟ್ಯಂತರ ಜನರ ಬದುಕಿನಲ್ಲಿ ಬದಲಾವಣೆ ತರುತ್ತಿರುವುದನ್ನು ಶ್ಲಾಘಿಸಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅವರ ಕೊಡುಗೆ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿದೆ ಎಂದಿದ್ದಾರೆ.


ಸೊಸೆಯಂದಿರಾದ ಪರಿಧಿ (ವಕೀಲೆ) ಮತ್ತು ದಿವಾ (ವಿನ್ಯಾಸಕಿ) ಕುಟುಂಬಕ್ಕೆ ಹೊಸ ದೃಷ್ಟಿಕೋನ ನೀಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ. ವಿಶೇಷವಾಗಿ ತಮ್ಮ ಮೂವರು ಹೆಣ್ಣು ಮೊಮ್ಮಕ್ಕಳ ಬಗ್ಗೆ ಮಾತನಾಡುತ್ತಾ, “ದಿನವಿಡೀ ಬಂದರು, ವಿಮಾನ ನಿಲ್ದಾಣ ಮತ್ತು ಉದ್ಯಮಗಳ ನಿರ್ಮಾಣದಲ್ಲಿ ವ್ಯಸ್ತವಾಗಿರುವ ನನಗೆ, ಮೊಮ್ಮಕ್ಕಳ ಸಾಮೀಪ್ಯ ಹೊಸ ಉತ್ಸಾಹ ನೀಡುತ್ತದೆ. ಆ ಪುಟ್ಟ ಕಂದಮ್ಮಗಳು ನನ್ನ ತೊಡೆ ಏರಿ ಕುಳಿತು ನಂಬಿಕೆಯಿಂದ ನೋಡಿದಾಗ, ನಾನು ಈ ಸಾಮ್ರಾಜ್ಯವನ್ನು ಯಾರಿಗಾಗಿ ಕಟ್ಟುತ್ತಿದ್ದೇನೆ ಎಂಬ ಸ್ಪಷ್ಟತೆ ಸಿಗುತ್ತದೆ,” ಎಂದು ಭಾವುಕವಾಗಿ ಬರೆದಿದ್ದಾರೆ.

“ಜೀವನದ ಅತಿ ಭದ್ರ ಬುನಾದಿಯನ್ನು ಉಕ್ಕು ಅಥವಾ ಕಾಂಕ್ರೀಟ್‌ನಿಂದ ಹಾಕಲಾಗುವುದಿಲ್ಲ; ಬದಲಾಗಿ ನಮ್ಮನ್ನು ರೂಪಿಸುವ ಪ್ರೀತಿಯ ವ್ಯಕ್ತಿಗಳು ಅದನ್ನು ನಿರ್ಮಿಸುತ್ತಾರೆ,” ಎಂಬ ಅದಾನಿ ಅವರ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Comments (0)

Your email address will not be published. Required fields are marked *

Back to top button