ಸಂಸತ್ ಭವನದ ಆವರಣದಲ್ಲಿ ನಟಿ, ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಮತ್ತು ಕೇಂದ್ರ ಸಚಿವ ಚಿರಾಗ್ ಪಸ್ವಾನ್ ಒಟ್ಟಾಗಿ ನಡೆದು ಬರುತ್ತಿರುವ ವೀಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ದೆಹಲಿಯಲ್ಲಿ ನಡೆದ ಎನ್‌ಡಿಎ ಸಂಸದೀಯ ಮಂಡಳಿಯ ಸಭೆಗೆ ಇವರಿಬ್ಬರು ಒಟ್ಟಾಗಿ ಆಗಮಿಸಿದ ದೃಶ್ಯಗಳು ಹಳೆಯ ‘ಗಾಸಿಪ್’ಗಳಿಗೆ ಮತ್ತೆ ಜೀವ ತುಂಬಿದ್ದು, ನೆಟ್ಟಿಗರು ಇವರಿಬ್ಬರ ಕೆಮಿಸ್ಟ್ರಿಯನ್ನು ಕಂಡು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಇವರಿಬ್ಬರ ಸ್ನೇಹ ಇಂದು ನಿನ್ನೆಯದಲ್ಲ; 2011ರಲ್ಲಿ ಬಿಡುಗಡೆಯಾದ ‘ಮಿಲೇ ನಾ ಮಿಲೇ ಹಮ್’ ಎಂಬ ಸಿನಿಮಾದಲ್ಲಿ ಇವರಿಬ್ಬರು ನಾಯಕ-ನಾಯಕಿಯಾಗಿ ನಟಿಸಿದ್ದರು. ಇದು ಚಿರಾಗ್ ಪಸ್ವಾನ್ ಅವರ ಚೊಚ್ಚಲ ಹಾಗೂ ಏಕೈಕ ಸಿನಿಮಾವಾಗಿತ್ತು. ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಕಾಣದ ಚಿರಾಗ್ ನಂತರ ಬಿಹಾರದ ರಾಜಕೀಯದಲ್ಲಿ ಸಕ್ರಿಯರಾಗಿ ಇಂದು ಕೇಂದ್ರ ಸಚಿವರಾಗಿದ್ದಾರೆ. ಇತ್ತ ಬಾಲಿವುಡ್‌ನ ‘ಕ್ವೀನ್’ ಕಂಗನಾ ರಣಾವತ್ ಕೂಡ ಸಂಸದೆಯಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದು, ಈ ಹಳೆಯ ಸಹನಟರು ಈಗ ರಾಜಕೀಯ ಸಹೋದ್ಯೋಗಿಗಳಾಗಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಅಧಿವೇಶನಕ್ಕೆ ಆಗಮಿಸುವಾಗ ಕಂಗನಾ ಅವರು ಕಪ್ಪು ಬಣ್ಣದ ಬ್ಯಾಗ್ ಹಿಡಿದು ಬೂದು ಬಣ್ಣದ ಕೋಟ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರೆ, ಚಿರಾಗ್ ಪಸ್ವಾನ್ ಬಿಳಿ ಜುಬ್ಬಾ ಮತ್ತು ಶಾಲಿನೊಂದಿಗೆ ಕ್ಲಾಸಿಕ್ ಲುಕ್‌ನಲ್ಲಿ ಮಿಂಚಿದ್ದಾರೆ. ಈ ವೀಡಿಯೋ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವ್ಯೂವ್ಸ್ ಪಡೆದಿದೆ. ನೆಟ್ಟಿಗರು “ಬಾಲಿವುಡ್ ಜೋಡಿ ಈಗ ಸಂಸತ್ತಿನಲ್ಲೂ ಹಿಟ್” ಎಂದು ಬಣ್ಣಿಸುತ್ತಿದ್ದು, “ಇವರಿಬ್ಬರೂ ಜೊತೆಯಾಗಿ ಸಖತ್ ಆಗಿ ಕಾಣಿಸುತ್ತಿದ್ದಾರೆ, ಮದುವೆಯಾಗಿ” ಎಂಬಂತಹ ತಮಾಷೆಯ ಕಾಮೆಂಟ್‌ಗಳು ಹರಿದುಬರುತ್ತಿವೆ.
ಈ ಹಿಂದೆ ಇವರಿಬ್ಬರ ಫೋಟೋಗಳು ವೈರಲ್ ಆದಾಗ, ಕಂಗನಾ ತಮಾಷೆಯಾಗಿ “ಪಾರ್ಲಿಮೆಂಟ್ ಸಂವಿಧಾನದ ದೇಗುಲ, ದಯವಿಟ್ಟು ನಮ್ಮನ್ನು ಅಲ್ಲಿಯಾದರೂ ಬಿಡಿ” ಎಂದು ಹೇಳಿದ್ದರು. ಜನರು ಇವರ ಕಾಲೆಳೆಯುತ್ತಿರುವುದರಿಂದ ಚಿರಾಗ್ ಈಗ ನನ್ನನ್ನು ನೋಡಿದ ತಕ್ಷಣ ದಾರಿ ಬದಲಿಸುತ್ತಾನೆ ಎಂದು ಕಂಗನಾ ಹಾಸ್ಯ ಚಟಾಕಿ ಹಾರಿಸಿದ್ದರು. ಆದರೂ ಇಬ್ಬರೂ ಇನ್ನೂ ಅವಿವಾಹಿತರಾಗಿರುವುದು ಮತ್ತು ಯುವ ರಾಜಕಾರಣಿಗಳಾಗಿ ಯಶಸ್ಸು ಕಾಣುತ್ತಿರುವುದು ಅಭಿಮಾನಿಗಳಲ್ಲಿ ಸದಾ ಕುತೂಹಲ ಮೂಡಿಸುತ್ತಿದೆ.


